ADVERTISEMENT

ಕಳೆದಿದ್ದ ತಾಳಿ ಹಾಸನಾಂಬ ಹುಂಡಿಯಲ್ಲಿ ಪತ್ತೆ: ಉತ್ಸವದಿಂದ ₹8.72 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 2:59 IST
Last Updated 17 ನವೆಂಬರ್ 2023, 2:59 IST
ಹಾಸನಾಂಬ ದೇಗುಲದ ಆವರಣದಲ್ಲಿ ಗುರುವಾರ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು
ಹಾಸನಾಂಬ ದೇಗುಲದ ಆವರಣದಲ್ಲಿ ಗುರುವಾರ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು   

ಹಾಸನ: ಹಾಸನಾಂಬ ದರ್ಶನಕ್ಕೆಂದು ಬಂದು ತಾಳಿಯನ್ನು ಕಳೆದುಕೊಂಡಿದ್ದ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮದ ರಮ್ಯಾ ಅವರ 5 ಗ್ರಾಂ ಚಿನ್ನದ ತಾಳಿಯು, ಗುರುವಾರ ಗುಡಿಯ ಹುಂಡಿ ಎಣಿಕೆ ವೇಳೆ ಪತ್ತೆಯಾಯಿತು. 

ಉತ್ಸವದ ಸಂದರ್ಭದಲ್ಲಿ ತಾಳಿ ಕಳೆದುಕೊಂಡಿದ್ದ ಗೃಹಿಣಿಯು ಉಪ ವಿಭಾಗಾಧಿಕಾರಿ ಮಾರುತಿ ಅವರಿಗೆ ಮಾಹಿತಿ ನೀಡಿ ತೆರಳಿದ್ದರು. ತಾಳಿಯನ್ನು ಗುರುವಾರ ಅಧಿಕಾರಿಗಳು ಅವರಿಗೆ ಮರಳಿಸಿದರು.

ಹಾಸನಾಂಬ ಹುಂಡಿಯಲ್ಲಿ ₹2.50 ಕೋಟಿ ಸಂಗ್ರಹವಾಗಿದೆ. ಟಿಕೆಟ್‌, ಲಾಡು ಮಾರಾಟದಿಂದ ₹6.15 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಈ ವರ್ಷ ದಾಖಲೆಯ ₹8.72 ಕೋಟಿ ಆದಾಯ ಸಂಗ್ರಹವಾಗಿದೆ.

ADVERTISEMENT

ಜೊತೆಗೆ 62 ಗ್ರಾಂ ಚಿನ್ನಾಭರಣ, 161 ಗ್ರಾಂ ಬೆಳ್ಳಿಯ ಆಭರಣಗಳು ಹುಂಡಿಯಲ್ಲಿ ಸಿಕ್ಕಿವೆ. ಇದೇ ಮೊದಲ ಬಾರಿಗೆ ಅಳವಡಿಸಿದ್ದ ಇ–ಹುಂಡಿಯಿಂದ ₹4.64 ಲಕ್ಷ ಸಂಗ್ರಹವಾಗಿದೆ.

ಭಕ್ತರು ವಿವಿಧ ಕೋರಿಕೆಗಳನ್ನು ಬರೆದು ದೇವಸ್ಥಾನದ ಹುಂಡಿಯಲ್ಲಿ ಹಾಕುತ್ತಾರೆ. ಈ ಕೋರಿಕೆಗಳ ಗೋಪ್ಯತೆ ಕಾಪಾಡಲೆಂದೇ ಕಳೆದ ವರ್ಷದಿಂದ ಪತ್ರಗಳನ್ನು ಓದದಂತೆ ದೇಗುಲದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.

ಹುಂಡಿಯಲ್ಲಿ ಸಿಕ್ಕ ಚಿನ್ನದ ತಾಳಿಯನ್ನು ರಮ್ಯಾ ಅವರಿಗೆ ಮರಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.