ಹಾಸನ: ಹಾಸನಾಂಬ ದರ್ಶನೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಈ ಬಾರಿ ವಿಶೇಷವಾಗಿ ಆಯೋಜನೆ ಮಾಡಿರುವ ‘ಆಗಸದಿಂದ ಹಾಸನ’ ಹೆಲಿ ಟೂರಿಸಂ, ಪ್ಯಾರಾಸೆಲಿಂಗ್, ಪ್ಯಾರಾ ಮೋಟರಿಂಗ್, ಪ್ಯಾಕೇಜ್ ಪ್ರವಾಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೆಲಿ ಟೂರಿಸಂನಲ್ಲಿ ನವೆಂಬರ್ 3 ರಂದು 85 ಮಂದಿ ಆಗಸದಲ್ಲಿ ಹಾರಾಟ ನಡೆಸಿದ್ದಾರೆ. ಶನಿವಾರ 135 ಮಂದಿ ಹೆಲಿಕಾಪ್ಟರ್‌ನಲ್ಲಿ ಹಾಸನ ನಗರ, ಹಾಸನಾಂಬ ದೇವಾಲಯ ವೀಕ್ಷಣೆ ಮಾಡಿದ್ದು, ಪ್ರತಿ ಬಾರಿಯೂ ಐದರಿಂದ ಆರು ಮಂದಿ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿದ್ದಾರೆ. ಇದುವರೆಗೆ ಒಟ್ಟು 220 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ.
‘ಪ್ರತಿ ವ್ಯಕ್ತಿಗೆ ₹ 4,300 ದರ ನಿಗದಿ ಮಾಡಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಕಾರ್ಯಕ್ರಮ ಮುಂದುವರಿಯಲಿದೆ. ಭಾನುವಾರ ಹಾಗೂ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೆಲಿಕಾಪ್ಟರ್ ಮೂಲಕ ಹಾಸನ ನಗರ ವೀಕ್ಷಣೆ ಮಾಡಲಿದ್ದಾರೆ’ ಎಂದು ಉಸ್ತುವಾರಿ ವಹಿಸಿರುವ ಸಹಾಯಕ ಎಂಜಿನಿಯರ್ ಮನು ತಿಳಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಪ್ಯಾರಾಸೆಲಿಂಗ್ ಹಾಗೂ ಪ್ಯಾರಾ ಮೋಟರಿಂಗ್ ಕಾರ್ಯಕ್ರಮದಲ್ಲಿ ಪ್ಯಾರಾಸೆಲಿಂಗ್‌ಗೆ ₹ 500, ಪ್ಯಾರಾ ಮೋಟರಿಂಗ್‌ಗೆ ₹ 2ಸಾವಿರ ನಿಗದಿ ಮಾಡಲಾಗಿದೆ. ನವೆಂಬರ್ 3 ರಂದು ಪ್ಯಾರಾ ಸೆಲಿಂಗ್‌ನಲ್ಲಿ 50 ಮಂದಿ, ಪ್ಯಾರಾ ಮೋಟರಿಂಗ್‌ನಲ್ಲಿ 15 ಮಂದಿ ಆಗಸದಲ್ಲಿ ಹಾರಾಟ ನಡೆಸಿದ್ದಾರೆ. ಶನಿವಾರ 30 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ ಎಂದು ಅಧಿಕಾರಿ ನಂದಕುಮಾರ್ ಮಾಹಿತಿ ನೀಡಿದರು.
ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ಆಯೋಜಿಸಿರುವ ಪ್ಯಾಕೇಜ್ ಪ್ರವಾಸಕ್ಕೆ ಸಾರ್ವಜನಿಕರಿಂದ ಉತ್ಸಾಹ ಕಾಣುತ್ತಿಲ್ಲ.
ಶನಿವಾರ ಸಕಲೇಶಪುರ ಮಾರ್ಗದ ₹ 425 ಪ್ಯಾಕೇಜ್ ಟೂರ್‌ಗೆ ಹಾಗೂ ಬೇಲೂರು ಮಾರ್ಗದ ₹ 350 ಪ್ಯಾಕೇಜ್ ಟೂರ್‌ಗೆ ಎರಡು ಬಸ್‌ಗಳನ್ನು ನಿಯೋಜನೆ ಮಾಡಲಾಗಿದ್ದು, ಎರಡೂ ಮಾರ್ಗದಿಂದ 45 ಮಂದಿ ಪ್ರವಾಸ ಮಾಡಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ರಕ್ಷಿತ್ ಮಾಹಿತಿ ನೀಡಿದರು.
2 ದಿನದಲ್ಲಿ ₹ 24 ಲಕ್ಷ ಸಂಗ್ರಹ
ಹಾಸನಾಂಬ ದರ್ಶನೋತ್ಸವ ಆರಂಭವಾದ ಎರಡು ದಿನದಲ್ಲಿ ವಿಶೇಷ ದರ್ಶನ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ₹24 ಲಕ್ಷ ಆದಾಯ ಸಂಗ್ರಹವಾಗಿದೆ.
ನ.3 ರಿಂದ ನ.4 ಸಂಜೆ 6 ರ ವೇಳೆಗೆ ₹ 1ಸಾವಿರ ಮುಖಬೆಲೆಯ 860 ಟಿಕೆಟ್ ಮಾರಾಟವಾಗಿದ್ದು, ₹ 8.60 ಲಕ್ಷ ಸಂಗ್ರಹಿಸಲಾಗಿದೆ. ₹ 300 ಮುಖಬೆಲೆಯ 5,178 ಟಿಕೆಟ್ ಮಾರಾಟ ಮಾಡಲಾಗಿದ್ದು, ₹ 15,53,400 ಸಂಗ್ರಹಿಸಲಾಗಿದೆ. ಒಟ್ಟು ₹ 23,13,400 ಸಂಗ್ರಹವಾಗಿದೆ ಎಂದು ಉಸ್ತುವಾರಿ ಅಧಿಕಾರಿ ಸುಜಯ್ ಮಾಹಿತಿ ನೀಡಿದ್ದಾರೆ.
ಲಾಡು ಪ್ರಸಾದ ಮಾರಾಟದಿಂದ ₹ 5,12,340 ಆದಾಯ ಸಂಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.