ಹಾಸನ : ‘ಹಾಸನಾಂಬ ದೇವಾಲಯದಲ್ಲಿ ಧ್ಯಾನ ಮಂದಿರ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಹಾಗೂ ದರ್ಶನದ ವೇಳೆ ದಸರಾ ಮಹೋತ್ಸವದಂತೆ ವಿಶೇಷ ಕಾರ್ಯಕ್ರಮ ನಡೆಸಬೇಕು’ ಎಂದು ಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶಮೂರ್ತಿ ಸಲಹೆ ನೀಡಿದರು.
ಹಾಸನಾಂಬ ದೇವಾಲಯದ ಆವರಣದಲ್ಲಿ ನಡೆದ ಹಾಸನಾಂಬ ದೇವಿಯ ಪರಂಪರೆ ಸಂರಕ್ಷಣಾ ವೇದಿಕೆ ಹಾಗೂ ಸಾಮಾಜಿಕ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು.
‘ಹಾಸನಾಂಬ ಉತ್ಸವದಲ್ಲಿ ಸಾಂಸ್ಕೃತಿಕ, ಕ್ರೀಡಾ ಜನಪದ ಕಾರ್ಯಕ್ರಮಗಳು ನಡೆಯಬೇಕು. ಈಗಾಗಲೇ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಬರುತ್ತಿದ್ದು, ಜಿಲ್ಲೆಯು ಕಲೆ ಮತ್ತು ಸಂಸ್ಕೃತಿಗೆ ಹೆಸರು ವಾಸಿಯಾಗಿದೆ. ಜಿಲ್ಲಾಡಳಿತ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ’ ಎಂದು ಒತ್ತಾಯಿಸಿದರು
ವಿಶ್ವ ಹಿಂದೂ ಪರಿಷತ್ ಮುಖಂಡ ಕಟ್ಟಾಯ ಶಿವಕುಮಾರ್ ಮಾತನಾಡಿ, ‘ಹಾಸನಾಂಬ ದೇವಿ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಅವರ ಭಕ್ತಿ ಭಾವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಹಿಂದಿನಿಂದಲೂ ಇಲ್ಲದ ಪವಾಡ ಪರೀಕ್ಷೆ ಈಗೇಕೆ ಅನಿವಾರ್ಯವಾಗಿದೆ? ದೇವಿಯ ಶಕ್ತಿ ಮತ್ತು ಮಹಿಮೆಯನ್ನು ಪರೀಕ್ಷಿಸುವ ಮಟ್ಟಕ್ಕೆ ಯಾರೂ ಇಳಿಯಬಾರದು’ ಎಂದು ಅಭಿಪ್ರಾಯಪಟ್ಟರು.
‘ಭಕ್ತರು ನೀಡುವ ಕಾಣಿಕೆ ಹಾಗೂ ಹುಂಡಿ ಹಣವನ್ನು ಜಿಲ್ಲೆ ಹಾಗೂ ಕೊಡಗು ಜಿಲ್ಲೆ ನೆರೆ ಸಂತ್ರಸ್ತರಿಗೆ ನೀಡಬೇಕು. ಜಿಲ್ಲಾಡಳಿತ ಟಿಕೆಟ್ ಮಾರಾಟ ಮಾಡಿ ಹಣ ಪಡೆಯಬಾರದು. ಎಲ್ಲರಿಗೂ ಸಮಾನ ದರ್ಶನದ ಅವಕಾಶ ನೀಡಬೇಕು. ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗದವರಿಗೆ ವಿಶೇಷ ದರ್ಶನ ಮಾಡಿಸುವ ಅಗತ್ಯವಿಲ್ಲ’ ಎಂದು ಹೇಳಿದರು.
ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಂಡು, ಜಾರಿಗೆ ತರುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು.
ಸಭೆಯಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್, ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಮಹಿಪಾಲ್, ಹಾಸನಾಂಬ ದೇವಿಯ ಚಲನಚಿತ್ರ ನಿರ್ಮಿಸಿರುವ ನಿರ್ಮಾಪಕ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.