ADVERTISEMENT

ಇನ್ನೂ ಸಾಕಾರವಾಗದ ಹಾಸನ ವಿಮಾನ ನಿಲ್ದಾಣ

ಶಂಕುಸ್ಥಾಪನೆ ನೆರವೇರಿಸಿ 17 ವರ್ಷವಾದರೂ ಕುಂಟುತ್ತ ಸಾಗಿರುವ ಕಾಮಗಾರಿ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2024, 6:56 IST
Last Updated 11 ಅಕ್ಟೋಬರ್ 2024, 6:56 IST
ಹಾಸನ ವಿಮಾನ ನಿಲ್ದಾಣದ ರನ್‌ವೇ.
ಹಾಸನ ವಿಮಾನ ನಿಲ್ದಾಣದ ರನ್‌ವೇ.   

ಹಾಸನ: ಜಿಲ್ಲೆಯ ಜನರ ಬಹುನಿರೀಕ್ಷಿತ ಹಾಸನ ವಿಮಾನ ನಿಲ್ದಾಣ ಕಾಮಗಾರಿ ದಶಕಗಳಿಂದ ಕುಂಟುತ್ತ ಸಾಗುತ್ತಿದ್ದು, ವಿಮಾನ ಹಾರಾಟ ಸಾಕಾರಗೊಳ್ಳುವ ಹಾದಿಯಲ್ಲಿ ಅನೇಕ ಅಡೆತಡೆಗಳು ಕಂಡುಬರುತ್ತಿವೆ.

ಹಾಸನ ವಿಮಾನ ನಿಲ್ದಾಣವು ನಿರ್ಮಾಣ ಹಂತದಲ್ಲಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವಾಗಿದೆ. ಇದನ್ನು ಭಾರತೀಯ ವಿಮಾನಯಾನ ಪ್ರಾಧಿಕಾರ (ಎಎಐ) ನಿರ್ಮಿಸುತ್ತಿದ್ದು, 2023ರಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದರೆ ಇಂದಿಗೂ ಕಾಮಗಾರಿ ಪೂರ್ಣವಾಗುತ್ತಿಲ್ಲ. 

ಇದು ಚಿಕ್ಕ ಎಟಿಆರ್ 72 ಮಾದರಿಯ ವಿಮಾನವನ್ನು ಇಳಿಸಲು ವಿನ್ಯಾಸಗೊಳಿಸಲಾಗಿದೆ. ದಟ್ಟಣೆಯ ಅವಧಿಯಲ್ಲಿ ಸುಮಾರು 200 ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗುತ್ತಿದೆ.

ADVERTISEMENT

ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಕಾಮಗಾರಿಯನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರು, 2007ರಲ್ಲಿ ಜೆಡಿಎಸ್– ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಇಂದಿನವರೆಗೂ ಸಹ ಅನೇಕ ಸರ್ಕಾರಗಳು ಬಂದು ಹೋದರೂ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ.

‘2,230 ಮೀಟರ್ ರನ್‌ವೇ ಅಂತಿಮ ಕಾಮಗಾರಿಯ ಕೆಲಸ ಬಾಕಿ ಉಳಿದಿದ್ದು, ವಿದ್ಯುತ್ ಹೈಟೆನ್ಶನ್ ಲೈನ್‌ಗಳ ಬದಲಾವಣೆಯ ಕಾರ್ಯ ಈಗಷ್ಟೇ ಪ್ರಾರಂಭವಾಗಬೇಕಿದೆ. ಪ್ಯಾಕೇಜ್ -1ರಲ್ಲಿ ಶೇ 75 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಪ್ಯಾಕೇಜ್ -2 ರಲ್ಲಿ ಶೇ 25 ರಷ್ಟು ಪ್ರಗತಿ ಆಗಿದೆ. ಎಲ್ಲ ಅಡೆತಡೆಗಳನ್ನು ನಿವಾರಿಸಿದರೆ, ಮುಂದಿನ 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎನ್ನುತ್ತಾರೆ ಗುತ್ತಿಗೆದಾರರು.

ಕಾಮಗಾರಿ ಪೂರ್ಣಗೊಳ್ಳುವ ಕುರಿತು ಸರ್ಕಾರ ಭರವಸೆ ನೀಡಿದ್ದರೂ ನಿರೀಕ್ಷೆಯಂತೆ ವೇಗ ಪಡೆದಿಲ್ಲ. ಈ ಮೊದಲ ವಿಮಾನ ನಿಲ್ದಾಣ ಯೋಜನಾ ವರದಿಯನ್ನು ₹220 ಕೋಟಿಗೆ ತಯಾರಿಸಲಾಗಿತ್ತು. ಈ ಪೈಕಿ ಕಾಂಪೌಂಡ್ ನಿರ್ಮಾಣ, ಸಂಪರ್ಕ ರಸ್ತೆ, ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಟವರ್ ಕಾಮಗಾರಿಗೆ ₹19.67 ಕೋಟಿ, ರನ್ ವೇ, ಎಫ್ರಾನ್‌ ಟ್ರ್ಯಾಕ್ಸ್ ವೇ, ಪೆರಿಫರಲ್ ರೋಡ್ ಮತ್ತು ಒಳ ಆವರಣ ರಸ್ತೆಗೆ ₹98.95 ಕೋಟಿ, ಟರ್ಮಿನಲ್ ಕಟ್ಟಡ, ಕಾರ್ಗೋ, ಎಟಿಸಿ ಟವರ್ ಹ್ಯಾಂಗರ್, ಅಗ್ನಿಶಾಮಕ ಠಾಣೆಗೆ ₹94.23 ಕೋಟಿ, ನೀರು ಸರಬರಾಜು ಮತ್ತು ನೈರ್ಮಲೀಕರಣ, ವಿದ್ಯುತ್ ಮತ್ತು ಇತರೆ ಕಾಮಗಾರಿಗೆ ₹6.05 ಕೋಟಿ ಮತ್ತು ಇತರೆ ವೆಚ್ಚಗಳು ₹7.20 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಕಾಮಗಾರಿ ವೆಚ್ಚದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಅಂದಾಜು ಮೊತ್ತ ₹193.65 ಕೋಟಿಗೆ ಇಳಿಕೆಯಾಗಿದೆ. ಈವರೆಗೂ ₹170 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ವಿಮಾನ ನಿಲ್ದಾಣ ಜೊತೆಗೆ ಗಾಲ್ಫ್ ಕೋರ್ಟ್, ಕಾರ್ಗೋ, ಎಂಆರ್‌ಒ ಸೌಲಭ್ಯ ಮತ್ತು ವಾಯುಯಾನ ತರಬೇತಿ ಕೇಂದ್ರ, ಸಂಪರ್ಕ ರಸ್ತೆ ಮುಂತಾದ ಮೂಲಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಒಂದಿಷ್ಟು ಬದಲಾವಣೆ ತರುವ ಮೂಲಕ ಕಾಮಗಾರಿಗೆ ವೇಗ ನೀಡಲು ಮುಂದಾದರೂ ಅದು ಸಂಪೂರ್ಣವಾಗಿ ಸಾಕಾರಗೊಳ್ಳಲಿಲ್ಲ.

ಸದ್ಯಕ್ಕೆ ಕಲಬುರ್ಗಿ, ಶಿವಮೊಗ್ಗ ಮತ್ತು ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಾದರಿಯಲ್ಲಿ ಹಾಸನದಲ್ಲೂ ನಿಲ್ದಾಣ ನಿರ್ಮಿಸುವ ಕ್ರಮ ಕೈಗೊಳ್ಳಲಾಗಿದೆ. ಎಟಿಆರ್-72 ಮಾದರಿ ವಿಮಾನಗಳ ಕಾರ್ಯಾಚರಣೆಗೆ ಅನುವಾಗುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಕಲಬುರ್ಗಿ, ಶಿವಮೊಗ್ಗ ಹಾಗೂ ವಿಜಯಪುರ ನಿಲ್ದಾಣಗಳನ್ನು ಎ-320 ಮಾದರಿ ವಿಮಾನಗಳ ಕಾರ್ಯಾಚರಣೆಗೆ ವಿನ್ಯಾಸ ಮಾಡಲಾಗಿದೆ. ಇದೇ ರೀತಿ ಹಾಸನದಲ್ಲಿ ನಿಲ್ದಾಣ ಆಗಬೇಕು ಎಂಬುದು ಇಲ್ಲಿನ ಕೈಗಾರಿಕೋದ್ಯಮಿಗಳ ಆಶಯ.

ಹಾಸನ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡದ ಕಾಮಗಾರಿ ಇನ್ನೂ ನಡೆಯುತ್ತಿದೆ.
ಇತ್ತೀಚೆಗೆ ಕೆಎಸ್‌ಐಐಡಿಸಿ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅನೇಕ ತೀರ್ಮಾನ ಕೈಗೊಳ್ಳಲಾಗಿದೆ. ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.
ಸಿ.ಸತ್ಯಭಾಮಾ ಜಿಲ್ಲಾಧಿಕಾರಿ

ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ನಿರೀಕ್ಷೆ

ಎಚ್.ಡಿ. ದೇವೇಗೌಡರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ 17 ವರ್ಷ ಕಳೆಯುತ್ತ ಬಂದರೂ ಇದುವರೆಗೂ ನಿಲ್ದಾಣದ ಕನಸು ಈಡೇರಿಲ್ಲ. ಇದೀಗ ಜಿಲ್ಲೆಯವರೇ ಆದ ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ವಿಮಾನ ನಿಲ್ದಾಣ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ. ವಿಮಾನ ನಿಲ್ದಾಣ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತ ಸಾಗಿದ್ದು ಈ ಹಿಂದಿನ ಮೂಲ ನಕ್ಷೆಯಂತೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ ಜೊತೆಗೆ ಜಿಲ್ಲೆಯ ಹೆದ್ದಾರಿ ರೈಲ್ವೆ ಸಮಸ್ಯೆ ಬಗ್ಗೆಯೂ ಮನವರಿಕೆ ಮಾಡಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಹೊಂಗೆರೆ ರಘು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.