ಹಾಸನ: ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಮುಂದುವರೆದಿದ್ದು, ಹುಂಡಿಯಲ್ಲಿ ವಿದೇಶಿ ನೋಟುಗಳು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಭಕ್ತರು ಹಾಕಿದ್ದಾರೆ.
ಹಾಸನಾಂಬ ಜಾತ್ರೆ ನ.15 ರಂದು ಮುಕ್ತಾಯವಾಗಿದ್ದು, ಗುರುವಾರ ಬೆಳಿಗ್ಗೆಯಿಂದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಸ್ವರೂಪ್ ಪ್ರಕಾಶ್, ಉಪ ವಿಭಾಗಾಧಿಕಾರಿ ಮಾರುತಿ ಉಸ್ತುವಾರಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದ ಎಣಿಕೆ ಕಾರ್ಯ ಮಾಡುತ್ತಿದ್ದಾರೆ.
ಹಾಸನಾಂಬ ದೇವಸ್ಥಾನಕ್ಕೆ ಬಂದಾಗ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮದ ರಮ್ಯಾ ಎಂಬುವವರ 5 ಗ್ರಾಂನ ಚಿನ್ನದ ತಾಳಿ ಕಳೆದು ಹೋಗಿತ್ತು. ಈ ಬಗ್ಗೆ ರಮ್ಯಾ ಅವರು ಉಪ ವಿಭಾಗಾಧಿಕಾರಿ ಮಾರುತಿ ಅವರಿಗೆ ಮಾಹಿತಿ ನೀಡಿದ್ದರು. ಹುಂಡಿ ಹಣ ಎಣಿಕೆ ಮಾಡುವಾಗ 5 ಗ್ರಾಂ ತಾಳಿ ಸಿಕ್ಕಿದೆ. ಬಿದ್ದಿದ್ದ ತಾಳಿಯನ್ನು ಯಾರೋ ಭಕ್ತಾದಿಗಳು ಹುಂಡಿಗೆ ಹಾಕಿದ್ದರು. ಅದನ್ನು ಗುರುವಾರ ಅಧಿಕಾರಿಗಳು ರಮ್ಯ ಅವರಿಗೆ ಮರಳಿಸಿದರು.
ಪ್ರತಿ ವರ್ಷ ಹುಂಡಿ ಹಣ ಎಣಿಕೆ ಕಾರ್ಯ ವಿಳಂಬವಾಗುತ್ತಿತ್ತು. ಈ ಬಾರಿ ಬೇಗನೆ ಎಣಿಕೆ ಮುಗಿಸಲು ಅನುವಾಗುವಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಸಂಜೆವರೆಗೂ ಎಣಿಕೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.
ಭಕ್ತರ ಪತ್ರ ಓದದಂತೆ ಸೂಚನೆ: ಪ್ರತಿ ಬಾರಿ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ದೇವಿಯ ಹುಂಡಿಗೆ ಹಾಕುತ್ತಾರೆ. ಹಲವಾರು ಬಗೆಯ ಕೋರಿಕೆಗಳು ಪತ್ರದಲ್ಲಿ ಇರುತ್ತವೆ. ಆದರೆ, ಭಕ್ತರ ಕೋರಿಕೆಯನ್ನು ಗೌಪ್ಯವಾಗಿ ಇಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಪತ್ರಗಳನ್ನು ಓದದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಹಾಗಾಗಿ ಪತ್ರಗಳನ್ನು ಹಾಗೆಯೇ ದೇವಿಯ ಸನ್ನಿಧಿಯಲ್ಲಿ ಇಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.