ಹಾಸನ: ಭಕ್ತರಿಗೆ ಹಾಸನಾಂಬ ದೇವಿಯ ದರ್ಶನ ಕಲ್ಪಿಸುವ ಕುರಿತು ಶನಿವಾರ ಏರ್ಪಟ್ಟ ವಾಗ್ವಾದದ ನಡುವೆ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಅವರ ಕೈಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಹೊಡೆದ ದೃಶ್ಯಾವಳಿ ಎಲ್ಲೆಡೆ ಹರಡಿ ಚರ್ಚೆಗೀಡಾಗಿದೆ.
ಸಚಿವರು ಹಾಗೂ ಶಾಸಕರನ್ನು ಒಳಗೆ ಬಿಡಲು ಶ್ರುತಿ ಅವರು ದ್ವಾರದ ಬೀಗ ತೆಗೆದಾಗ ಸಾವಿರಾರು ಜನರು ದೇವಾಲಯಕ್ಕೆ ನುಗ್ಗಿದರು. ಆಗ, ‘ಗೇಟ್ ತೆಗೆದವರು ಯಾರು?’ ಎಂದು ಡಿ.ಸಿ.ಸಿಡಿಮಿಡಿಗೊಂಡರು. ತಮ್ಮ ಮಾತಿಗೆ ಉತ್ತರಿಸುತ್ತಿದ್ದ ಅಧಿಕಾರಿಯ ಕೈಗೆ ಹೊಡೆದರು. ಅಧಿಕಾರಿಯು ಸಮಜಾಯಿಷಿಯನ್ನು ನೀಡುತ್ತಲೇ ಇದ್ದರು. ಭಕ್ತರ ಕಡೆಗೆ ತಿರುಗಿದ ಡಿ.ಸಿ, ‘ಹೋಗಿ ನಿಮ್ಮ ಕೆಲಸ ಮಾಡಿ’ ಎಂದು ಗುಡುಗಿದರು.
ವಿವಿಐಪಿ ಗೇಟ್ ಮುಂಭಾಗವೂ ಎಸ್‌ಪಿ ಮೊಹಮದ್ ಸುಜೀತಾ ಅವರೊಂದಿಗೆ ವಾಗ್ವಾದ ನಡೆಸಿದರು. ‘ಪರಿಸ್ಥಿತಿಯನ್ನು ನಿಯಂತ್ರಿಸಲಾಗುತ್ತಿಲ್ಲ, ಬಿಡಿ’ ಎಂಬ ಎಸ್ಪಿ ಅವರ ಮಾತಿಗೆ, ‘ಒಮ್ಮೆಲೆ ಜನರನ್ನು ಬಿಡುವುದಕ್ಕೆ ಆಗಲ್ಲ. ನಾವು ಹೋಗ್ತೇವೆ. ನೀವು ಮಾಡಿಕೊಳ್ಳಿ’ ಎಂದು ಮತ್ತೆ ಸಿಟ್ಟಾದರು.
‘ಬನ್ನಿ ನಾವು ಹೋಗೋಣ’ ಎಂದು ಉಪವಿಭಾಗಾಧಿಕಾರಿ ಶ್ರುತಿ ಅವರನ್ನು ಕರೆದುಕೊಂಡು ಹೊರಡುತ್ತಿದ್ದಂತೆಯೇ ಎಸ್‌ಪಿ ಕೂಡ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.