ADVERTISEMENT

ಹಾಸನ| ಯಡಿಯೂರಪ್ಪ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ: ಶಿವಕುಮಾರ್‌ ಸವಾಲು

7 ನೇ ವೇತನ ಆಯೋಗ ಜಾರಿಗೆ ಬದ್ಧ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 7:48 IST
Last Updated 1 ಮಾರ್ಚ್ 2023, 7:48 IST
   

ಹಾಸನ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾಗಿರುವ 7 ನೇ ವೇತನ ಆಯೋಗದ ಜಾರಿಗೆ ಕಾಂಗ್ರೆಸ್‌ ಬದ್ಧವಾಗಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಭರವಸೆ ನೀಡುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಹೋರಾಟ ಅವರ ಹಕ್ಕು. ಅದನ್ನು ನಾವು ಜಾರಿಗೆ ತರಲು ಸಿದ್ಧರಿದ್ದೇವೆ ಎಂದರು.

ಬಳಸಿ, ಬಿಸಾಕುವ ಸಂಸ್ಕೃತಿ: ರಾಜ್ಯದ ಬಿಜೆಪಿ ನಾಯಕರದ್ದು ಬಳಸಿ ಬಿಸಾಕುವ ಸಂಸ್ಕೃತಿ. ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಏನು ತೊಂದರೆ ಕೊಟ್ಟರು ಎಂಬುದು ಗೊತ್ತಿದೆ. ಈಗ ಅವರನ್ನು ಪ್ರಧಾನಿ ಹೊಗಳುತ್ತಿದ್ದಾರೆ ಎಂದು ಟೀಕಿಸಿದರು.
ಇದುವರೆಗೆ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳುತ್ತಿದ್ದ ಬಿಜೆಪಿ ನಾಯಕರು, ಈಗ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎನ್ನುತ್ತಿದ್ದಾರೆ. ಹಾಗಾದರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಸವಾಲು ಹಾಕಿದರು.

ADVERTISEMENT

ಪ್ರಧಾನಿ ಮೋದಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ಎಂದು ಹೇಳಿರುವುದು ಖಂಡನೀಯ. ಮಹಾತ್ಮ ಗಾಂಧಿ, ಜಗಜೀವನ್ ರಾಂ, ರಾಜೀವ್ ಗಾಂಧಿ ಸೇರಿದಂತೆ ಮಹಾ ನಾಯಕರು ಅಲಂಕರಿಸಿದ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ನಿರ್ವಹಿಸುತ್ತಿದ್ದಾರೆ. ಅಂತಹ ವ್ಯಕ್ತಿಯ ವಿರುದ್ಧ ನರೇಂದ್ರ ಮೋದಿ ಅವರ ಇಂತಹ ಹೇಳಿಕೆ ಸರಿಯಲ್ಲ ಎಂದರು.

1972 ರಿಂದ ಇಲ್ಲಿಯವರೆಗೆ ಸಂಸದೀಯ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯದ ಅಡಿ ಕಾರ್ಯ ನಿರ್ವಹಿಸುತ್ತಿದ್ದು ಒಬ್ಬ ದಲಿತ ನಾಯಕನ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಶಿವಕುಮಾರ್ ಹೇಳಿದರು.

ಮೋದಿ ಅವರ ಇಂತಹ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವ ರೀತಿಯಲ್ಲಿದೆ. ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ಬಿಸಿಲಿನ ತಾಪದ ಕಾರಣ ಸೋನಿಯಾ ಗಾಂಧಿ ಅವರಿಗೆ ಛತ್ರಿ ಹಿಡಿದಿದ್ದನ್ನೇ ನೆಪವಾಗಿಸಿಕೊಂಡು ಟೀಕಿಸುವುದು ಸರಿಯಲ್ಲ. ಕಾಂಗ್ರೆಸ್‌ ಪಕ್ಷ ನಾಯಕತ್ವದಲ್ಲಿ ನಂಬಿಕೆ ಇಟ್ಟಿದೆ. ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿ, ಸರಳತೆ ಮೆರೆದವರು ಸೋನಿಯಾ ಗಾಂಧಿ. ಪಕ್ಷವು ಇಂತಹ ಹೇಳಿಕೆಗಳನ್ನು ಖಂಡಿಸುತ್ತದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಇದುವರೆಗೆ ರಾಜ್ಯದ ಜನರನ್ನು ದ್ವಂದ್ವದಲ್ಲಿ ಇಟ್ಟು ಆಡಳಿತ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳನ್ನು ಜನರು ತಿರಸ್ಕರಿಸಲಿದ್ದಾರೆ. ಇನ್ನು 30 ದಿನ ಕಳೆದರೆ ಬಿಜೆಪಿ ಸರ್ಕಾರದ ಆಡಳಿತ ಮುಗಿಯಲಿದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕರ್ನಾಟಕ ರಾಜ್ಯವು ಅಭಿವೃದ್ಧಿಯಶೀಲ ರಾಜ್ಯವಾಗಿ ಪರಿವರ್ತನೆ ಆಗಲಿದೆ ಎಂದರು.
ಕೋವಿಡ್, ಪ್ರವಾಹ ಪರಿಸ್ಥಿತಿಯಲ್ಲಿ ರಾಜ್ಯ ಜನರು, ರೈತರ ಕಷ್ಟವನ್ನು ಕೇಳಲು ರಾಜ್ಯಕ್ಕೆ ಬರದ ಪ್ರಧಾನಿ ಮೋದಿ, ಇಂದು ಚುನಾವಣೆ ಪ್ರಚಾರಕ್ಕಾಗಿ ಪದೇ ಪದೇ ಬರುತ್ತಿದ್ದಾರೆ ಎಂದರು.

ಎಲ್ಲರೂ ಎಲ್ಲರ ಜೊತೆ ಮಾತನಾಡುತ್ತಾರೆ: ರಾಜಕೀಯದಲ್ಲಿ ಇರುವವರು ಎಲ್ಲರೂ ಎಲ್ಲರ ಜೊತೆ ಮಾತನಾಡುತ್ತಾರೆ. ನಾನು ಮಂಜು ಜೊತೆ ಮಾತನಾಡುತ್ತೇನೆ. ಸ್ವರೂಪ್‌ ನನ್ನ ಜೊತೆ ಮಾತನಾಡುತ್ತಾರೆ. ಅದೇ ರೀತಿ ಬಿಜೆಪಿ, ಜೆಡಿಎಸ್‌ನವರ ಜೊತೆಗೂ ಸ್ವರೂಪ್‌ ಮಾತನಾಡುತ್ತಾರೆ. ಇದರಲ್ಲಿ ಏನು ವಿಶೇಷವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಅರಸೀಕೆರೆ, ಅರಕಲಗೂಡು ಶಾಸಕರು ಚರ್ಚೆ ನಡೆಸಿರುವುದು ನಿಜ. ಆದರೆ ಪಕ್ಷ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಶಿವಕುಮಾರ್‌, ಮಾ.5 ರಂದು ಅರಸೀಕೆರೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೋಗುತ್ತಿದ್ದಾರೆ ಎಂದು ಹೇಳುವ ಮೂಲಕ ಶಿವಲಿಂಗೇಗೌಡರು ಪಕ್ಷಕ್ಕೆ ಸೇರ್ಪಡೆ ಖಚಿತ ಎನ್ನುವ ಸುಳಿವು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.