ADVERTISEMENT

ಹಾಸನ: ಜೀವವಿಮೆ ಹಣಕ್ಕಾಗಿ ಸತ್ತಂತೆ ಬಿಂಬಿಸಿದ್ದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 18:59 IST
Last Updated 24 ಆಗಸ್ಟ್ 2024, 18:59 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಹಾಸನ: ತನ್ನನ್ನೇ ಹೋಲುವ ವ್ಯಕ್ತಿಯನ್ನು ಕೊಲೆ ಮಾಡಿ, ತಾನೇ ಮೃತಪಟ್ಟಂತೆ ಬಿಂಬಿಸಿದ್ದ ಆರೋಪಿ, ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶ್ವಾಮಿಗೌಡ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಸಂಚಿಗೆ ಸಹಕರಿಸಿದ ಆತನ ಪತ್ನಿ ಶಿಲ್ಪಾರಾಣಿಯನ್ನೂ ಬಂಧಿಸಲಾಗಿದೆ.

‘ಜೀವವಿಮೆ ಹಣ ಪಡೆಯಲು ಆರೋಪಿಗಳು ಸಂಚು ರೂಪಿಸಿದ್ದರು’ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ADVERTISEMENT

ಘಟನೆಯ ವಿವರ:

ಆ.12ರಂದು ರಾತ್ರಿ ಗಂಡಸಿ ಬಳಿಯ ಗೊಲ್ಲರಹೊಸಳ್ಳಿ ಗೇಟ್‌ ಬಳಿ ಅಪಘಾತ ನಡೆದಿತ್ತು. ಕಾರಿನ ಚಕ್ರ ಬದಲಿಸುತ್ತಿದ್ದಾಗ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ, ಮೃತದೇಹ ತನ್ನ ಪತಿಯದು ಎಂದು ಆರೋಪಿ ಪತ್ನಿ ಹೇಳಿದ್ದರು. ಅಂತ್ಯಸಂಸ್ಕಾರವೂ ನಡೆದಿತ್ತು. ಆದರೆ, ಮೃತದೇಹದ ಕುತ್ತಿಗೆ ಮೇಲೆ ಗಾಯದ ಗುರುತು ಇದ್ದುದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿ ‌ತಲೆಮರೆಸಿಕೊಂಡಿದ್ದ. ನಂತರ ಆತನೇ ತನ್ನ ಸಂಬಂಧಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರನ್ನು ಭೇಟಿ ಮಾಡಿ, ‘ಅಪಘಾತದಲ್ಲಿ ಬೇರೊಬ್ಬ ವ್ಯಕ್ತಿ ಮೃತಪಟ್ಟಿದ್ದ’ ಎಂದು ತಿಳಿಸಿದ್ದ. ಅನುಮಾನಗೊಂಡ ಅಧಿಕಾರಿಯು, ಆರೋಪಿಯನ್ನು ಗಂಡಸಿ ಪೊಲೀಸರಿಗೆ ಒಪ್ಪಿಸಿದ್ದರು.

‘ಆರೋಪಿ ಪತ್ನಿಯ ವಿಚಾರಣೆ ನಡೆಸಿದಾಗ ಆಕೆ ತನಗೇನೂ ಗೊತ್ತಿಲ್ಲವೆಂಬಂತೆ ನಟಿಸಿದ್ದರು. ಮುನಿಶ್ವಾಮಿಗೌಡನನ್ನು ಆಕೆಯ ಎದುರು ಹಾಜರುಪಡಿಸಿದಾಗ ಎಲ್ಲ ವಿವರ ಹೊರಬಿದ್ದವು. ಟಯರ್‌ ಮಾರಾಟ ಮಳಿಗೆ ಹೊಂದಿರುವ ಆರೋಪಿಯು ತಾನು ಮಾಡಿದ್ದ ಸಾಲ ತೀರಿಸಲೆಂದೇ ಪತ್ನಿ ಜೊತೆ ಸೇರಿ ವಂಚನೆಯ ಯೋಜನೆ ರೂಪಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯು ತನ್ನನ್ನೇ ಹೋಲುವ ವ್ಯಕ್ತಿಯೊಬ್ಬನನ್ನು ವಿಶ್ವಾಸಕ್ಕೆ ಪಡೆದು, ಕಾರಿನಲ್ಲಿ ಕರೆತಂದಿದ್ದ. ಕಾರಿನ ಟಯರ್‌ ಬದಲಿಸಲು ಹೇಳಿ, ಆಗ ಆ ವ್ಯಕ್ತಿಯ ಕುತ್ತಿಗೆಗೆ ಹಗ್ಗ ಹಾಕಿ ರಸ್ತೆಗೆ ಎಳೆದಿದ್ದ. ನಂತರ ಲಾರಿಯನ್ನು ಆತನ ಮೇಲೆ ಹರಿಸಿದ್ದ. ನಂತರ ಅಪಘಾತದಲ್ಲಿ ತಾನೇ ಮೃತಪಟ್ಟಿರುವಂತೆ ಬಿಂಬಿಸಿದ್ದ. ಈಗ, ‘ನಿಜಕ್ಕೂ ಕೊಲೆಯಾದ ವ್ಯಕ್ತಿ ಯಾರು’ ಎಂಬ ಕುರಿತು ಹಾಗೂ ಆರೋಪಿಗಳು ಪಡೆಯಲು ಬಯಸಿದ್ದ ವಿಮೆಯ ಮಾಹಿತಿಯ ತನಿಖೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.