ಗೋಪ್ಯವಾಗಿ ಹಾಮೂಲ್ ಚುನಾವಣೆ: ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯನ್ನು ಗೋಪ್ಯವಾಗಿ ಮಾಡಿದ್ದಾರೆ. ಹಾಸನ ಹಾಲು ಒಕ್ಕೂಟ ಯಾರಪ್ಪನ ಆಸ್ತಿಯೂ ಅಲ್ಲ ಎಂದು ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಪ್ಯವಾಗಿ ಚುನಾವಣೆ ಮಾಡುವ ಮೂಲಕ ಜಿಲ್ಲೆಯ ಜನರನ್ನು ವಂಚಿಸಿದ್ದಾರೆ. ಇದ್ದಕ್ಕಿದ್ದಂತೆ ಚುನಾವಣೆ ಅಧಿಸೂಚನೆ ಹೊರಡಿಸಿದ್ದು ಸರಿಯಲ್ಲ. ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿದೇಶಕ್ಕೆ ಹೋಗಿರುವುದನ್ನು ನೋಡಿ ಚುನಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಎಲ್ಲಿಯೂ ಪ್ರಚಾರ ಮಾಡದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಹೆದರಿಸಿದ್ದಾರೆ. ಮುಂದೆ ಸರ್ಕಾರದ ಗಮನಕ್ಕೆ ತರುತ್ತೇವೆ. ಸಚಿವರನ್ನು ಭೇಟಿ ಮಾಡಿ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವು ದೂರು ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪರವಿದ್ದ ಸೊಸೈಟಿಗಳನ್ನು ಪಟ್ಟಿ ಮಾಡದೇ ಕೈಬಿಟ್ಟಿದ್ದಾರೆ. ಇದರಲ್ಲಿ ನಮ್ಮ ಸರ್ಕಾರದ ತಪ್ಪಿದ್ದು, ವ್ಯವಸ್ಥಾಪಕ ನಿರ್ದೇಶಕರನ್ನು ಸರ್ಕಾರದಿಂದಲೇ ಹಾಕಿದ್ದಾರೆ. ಅವರು ದನ ಕಾಯುತ್ತಿದ್ದಾರೆ. ಸಚಿವರ ಗಮನಕ್ಕೆ ತರಬಹುದಿತ್ತು. ಇಂತಹ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿರುವವರನ್ನು ಖಂಡಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.