ADVERTISEMENT

ಪಬ್ಲಿಕ್ ಶಾಲೆ ರಸ್ತೆ ಪಕ್ಕದ ಕಸದ ರಾಶಿ ತೆರವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 1:29 IST
Last Updated 10 ಫೆಬ್ರುವರಿ 2021, 1:29 IST
ಹಳೇಬೀಡಿನ ಸರ್ಕಾರಿ ಪಬ್ಲಿಕ್ ಶಾಲೆ ಮುಂಭಾಗದ ರಸ್ತೆ ಬದಿಯಲ್ಲಿ ಮಂಗಳವಾರ ಸ್ವಚ್ಛತೆಯ ಕೆಲಸ ನಡೆಯಿತು
ಹಳೇಬೀಡಿನ ಸರ್ಕಾರಿ ಪಬ್ಲಿಕ್ ಶಾಲೆ ಮುಂಭಾಗದ ರಸ್ತೆ ಬದಿಯಲ್ಲಿ ಮಂಗಳವಾರ ಸ್ವಚ್ಛತೆಯ ಕೆಲಸ ನಡೆಯಿತು   

ಪ್ರಜಾವಾಣಿ ವಾರ್ತೆ

ಹಳೇಬೀಡು: ಸರ್ಕಾರಿ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಯಾಗಿರುವ ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಗ್ರಾಮ ಪಂಚಾಯಿತಿಯವರು ಮಂಗಳವಾರ ತೆರವು ಮಾಡಿ, ಸ್ವಚ್ಛಗೊಳಿಸಿದರು.

ಶಾಲೆ ಮುಂಭಾಗ ರಸ್ತೆ ಬದಿಯಲ್ಲಿ ಕಸ ರಾಶಿ ಎಲ್ಲೆಂದರಲ್ಲಿ ಬಿದ್ದಿದ್ದರಿಂದ ‘ಪ್ರಜಾವಾಣಿ’ ಸೋಮವಾರ (ಫೆ. 8ರಂದು) ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ‘ಪಬ್ಲಿಕ್ ಶಾಲೆ ರಸ್ತೆ ತುಂಬ ತ್ಯಾಜ್ಯ’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿಯವರು ಸ್ವಚ್ಛತೆಯ ಕೆಲಸ ಕೈಗೊಂಡಿದ್ದಾರೆ.

ADVERTISEMENT

ಶಾಲೆಯ ಸ್ವಾಗತ ಕಮಾನಿನ ಪಕ್ಕದಲ್ಲಿಯೇ ಹಾಕಿದ್ದ ಹಳೆಯ ಚಪ್ಪಲಿ ರಾಶಿ, ಎಳನೀರು ಹಾಗೂ ಮದ್ಯದ ಬಾಟಲಿಗಳನ್ನು ಹೊರಸಾಗಿಸಲಾಯಿತು. ಶಾಲೆಯ ಬಳಿ ಎಳನೀರು ಮಟ್ಟೆ ಹಾಕುತ್ತಿದ್ದ ವರ್ತಕರಿಗೆ ಎಚ್ಚರಿಕೆ ನೀಡಲಾಗಿದೆ. ಕಸ ಸುರಿಯದಂತೆ ಶಾಲೆಯ ಬಳಿ ಇರುವ ಗೂಡಂಗಡಿಯವರಿಗೆ ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಮಾತನಾಡಿ, ‘ಎಲ್ಲದಕ್ಕೂ ಗ್ರಾಮ ಪಂಚಾಯಿತಿಯನ್ನೇ ಹೊಣೆ ಮಾಡಬಾರದು. ಶಾಲೆ, ಆಸ್ಪತ್ರೆ ಮೊದಲಾದ ಸಾರ್ವಜನಿಕ ಉಪಯೋಗಿ ಸ್ಥಳದ ಸುತ್ತಲಿನ ಸ್ಥಳದಲ್ಲಿ ಕಸ ಎಸೆದು ಗಲೀಜು ಮಾಡಬಾರದು. ಮನೆ ಹಾಗೂ ಅಂಗಡಿಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ಪಂಚಾಯಿತಿಯ ಕಸದ ವಾಹನಕ್ಕೆ ಹಾಕಬೇಕು. ಇನ್ನೂ ಮುಂದೆ ಎಲ್ಲೆಂದರಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.