ಹಾಸನ: ‘ಬಡವರ ಊಟಿ’ಎಂದೇ ಹೆಸರಾಗಿರುವ ಹಾಸನ ಎರಡು ದಿನಗಳ ಸಾಹಿತ್ಯ ಜಾತ್ರೆಗೆ ಸಜ್ಜುಗೊಂಡಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಫೆ.20, 21ರಂದು ಎಸ್.ವಿ.ರಂಗಣ್ಣ ರಸ್ತೆಯಲ್ಲಿರುವ ಕನ್ನಡ
ಸಾಹಿತ್ಯ ಪರಿಷತ್ ಆವರಣದಲ್ಲಿ ಆದ್ಯವಚನಕಾರ ದೇವರ ದಾಸಿಮಯ್ಯ ಮಹಾದ್ವಾರ, ಡಾ.ಎಸ್.ಕೆ.ಕರೀಂಖಾನ್
ವೇದಿಕೆಯಲ್ಲಿ ನುಡಿ ಹಬ್ಬ ನಡೆಯಲಿದ್ದು, ಭರದ ಸಿದ್ಧತೆಗಳು ನಡೆದಿವೆ.
ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಈ ಬಾರಿ ಪರಿಷತ್ ಆವರಣದಲ್ಲಿಯೇ ಸಮ್ಮೇಳನ
ಆಯೋಜಿಸಲಾಗಿದೆ. 1,500 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಎಲ್‌ಇಡಿ ಪರದೆ ವ್ಯವಸ್ಥೆ ಸಹ ಮಾಡಲಾಗಿದೆ.
ನಗರದ ಪ್ರಮುಖ ವೃತ್ತ ಮತ್ತು ದ್ವಾರಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಸಮ್ಮೇಳನದ ಫ್ಲೆಕ್ಸ್‌ಗಳು
ಸಾಹಿತ್ಯಾಸಕ್ತರನ್ನು ಸ್ವಾಗತಿಸುತ್ತಿವೆ. ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಕೊನೆ ದಿನ ಸಮ್ಮೇಳನಾಧ್ಯಕ್ಷರ ಬದುಕು–ಬರಹ–ಅವಲೋಕನ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷ ಮೇಟಿಕೆರೆ ಹಿರಿಯಣ್ಣ ಕುರಿತು ಅವರ ಆಪ್ತರು ಮಾತನಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಜಿಲ್ಲೆಯ ವಿವಿಧೆಡೆ ಸಮ್ಮೇಳನ ನಡೆಸಿ, ಯಶಸ್ವಿಯಾಗಿದ್ದರು. ತಮ್ಮ
ಆಡಳಿತಾವಧಿಯ ಕೊನೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಸುತ್ತಿದ್ದಾರೆ.
ಮೊದಲ ದಿನ ಕನ್ನಡ ಜಾಗೃತಿ ಅಭಿಯಾನದ ಬೈಕ್ ರ್‍ಯಾಲಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್ ಕುಮಾರ್ ಹಾಗೂ ಕನ್ನಡ ಭುವನೇಶ್ವರಿ ದಿಬ್ಬಣಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಚಾಲನೆ ನೀಡುವರು. ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸಾಹಿತಿ ದೊಡ್ಡರಂಗೇಗೌಡ ಅವರು ಸಮ್ಮೇಳನ ಉದ್ಘಾಟಿಸುವರು. ಇದಾದ ಬಳಿಕ ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂ ಸಹ ಕರೀಂಖಾನ್ ವೇದಿಕೆಯಲ್ಲಿ ನಡೆಯಲಿದೆ.
‘ಕೋವಿಡ್ ಕಾರಣದಿಂದ ಅದ್ದೂರಿಯಾಗಿ ಸಮ್ಮೇಳನ ಆಚರಿಸುತ್ತಿಲ್ಲ. ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುತ್ತಿದೆ.
ಶಾಲಾ, ಕಾಲೇಜು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿಲ್ಲ. ವಿಚಾರಗೋಷ್ಠಿ, ಕವಿಗೋಷ್ಠಿಗೆ ಆದ್ಯತೆ ನೀಡಲಾಗಿದೆ. ಐದು ವರ್ಷದ ಅಧಿಕಾರವಧಿಯಲ್ಲಿ ಎಲ್ಲ ಸಮುದಾಯದವರಿಗೂ ಸಮ್ಮೇಳನಗಳಲ್ಲಿ ಅವಕಾಶ ನೀಡಲಾಗಿದೆ. ಸಮ್ಮೇಳನದ ಆವರಣದಲ್ಲಿ ಪುಸ್ತಕ, ಆಹಾರ ಮಳಿಗೆ ತೆರೆಯಲಾಗುತ್ತಿದೆ. ಎರಡು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ತಿಳಿಸಿದರು.
‘ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಫೆ.20 ರಂದು ಅನ್ಯ ಕಾರ್ಯ ನಿಮಿತ್ತ
ಸೌಲಭ್ಯ (ಒಒಡಿ) ಕಲ್ಪಿಸಲಾಗಿದೆ. ಮೊದಲ ದಿನ ಮಧ್ಯಾಹ್ನ ಅನ್ನ, ಹುರುಳಿ ಸಾಂಬರ್, ಮಜ್ಜಿಗೆ, ಉಪ್ಪಿನಕಾಯಿ, ಪಲ್ಯ, ಬೆಲ್ಲದ ಪಾಯಸ, ಸಂಜೆ ಕಾಫಿ, ಟೀ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ಕನ್ನಡ ಪ್ರೇಮಿಗಳಿಗೆ ಎರಡನೇ ದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಅನ್ನ, ಸೊಪ್ಪಿನ ಸಾಂಬರ್, ಪಲ್ಯ, ಜಿಲೆಬಿ ಸೇರಿದಂತೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.