ADVERTISEMENT

ಮೇ 31ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುವೆ: ವಿಡಿಯೊ ಹಂಚಿಕೊಂಡ ಪ್ರಜ್ವಲ್ ರೇವಣ್ಣ

​ಪ್ರಜಾವಾಣಿ ವಾರ್ತೆ
Published 27 ಮೇ 2024, 10:49 IST
Last Updated 27 ಮೇ 2024, 10:49 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ಬೆಂಗಳೂರು: ‘ನನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳ ಎದುರು ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ (ಏಪ್ರಿಲ್‌ 26) ದೇಶ ತೊರೆದು ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅಜ್ಞಾತ ಸ್ಥಳದಿಂದ ಸೋಮವಾರ ವಿಡಿಯೊ ಬಿಡುಗಡೆ ಮಾಡಿದ್ದು, ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ನನ್ನ ತಂದೆ– ತಾಯಿ, ತಾತನಿಗೆ ಹಾಗೂ ಕುಮಾರಣ್ಣನಿಗೆ ಕ್ಷಮೆ ಕೇಳುತ್ತೇನೆ. ನಾನು, ವಿದೇಶದಲ್ಲಿ ಎಲ್ಲಿ ಇದ್ದೇನೆ ಎಂಬ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ. ಅದಕ್ಕೆ ಮಾಹಿತಿ ನೀಡಲು ಬಂದಿದ್ದೇನೆ’ ಎಂದು ಪ್ರಜ್ವಲ್ ವಿಡಿಯೊದಲ್ಲಿ ತಿಳಿಸಿದ್ದಾರೆ.

‘ಏಪ್ರಿಲ್ 26ರಂದು ಚುನಾವಣೆ ನಡೆಯುವವರೆಗೂ ನನ್ನ ವಿರುದ್ದ ಯಾವುದೇ ಪ್ರಕರಣಗಳು ಇರಲಿಲ್ಲ. ಎಸ್‌ಐಟಿ ಸಹ ರಚನೆಯಾಗಿರಲಿಲ್ಲ. 26ರಂದು ವಿದೇಶಕ್ಕೆ ಹೋಗುವುದು ಮುಂಚೆಯೇ ತೀರ್ಮಾನವಾಗಿತ್ತು. ಹೀಗಾಗಿ, ವಿದೇಶಕ್ಕೆ ಬಂದಿದ್ದೇನೆ. ನನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಮಾಧ್ಯಮಗಳ ಮೂಲಕ ಗೊತ್ತಾಯಿತು. ಎಸ್‌ಐಟಿ ಸಹ ನೋಟಿಸ್ ನೀಡಿತ್ತು. ನಾನು ಸಹ ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ಹಾಗೂ ನನ್ನ ವಕೀಲರ ಮೂಲಕ ಉತ್ತರ ನೀಡಿದ್ದೆ. 7 ದಿನ ಸಮಯಾವಕಾಶ ಕೋರಿದ್ದೆ’ ಎಂದು ಅವರು ಹೇಳಿದ್ದಾರೆ.

ಎಸ್‌ಐಟಿ ಬಳಿ ಇರುವ ಮಾಹಿತಿ, ದಾಖಲೆಗಳ ಆಧಾರದ ಮೇಲೆ ಪ್ರಜ್ವಲ್ ವಿಚಾರಣೆ ನಡೆಯಲಿದೆ. ಈಗಾಗಲೇ ಬಂಧನ ವಾರಂಟ್ ಜಾರಿಯಾಗಿದೆ. ತನಿಖೆಗಾಗಿ ಬಂಧಿಸಬೇಕಾಗುವುದು.
ಪರಮೇಶ್ವರ, ಗೃಹ ಸಚಿವ

‘ನೋಟಿಸ್‌ಗೆ ಉತ್ತರ ನೀಡಿದ ಬಳಿಕ, ಮರುದಿನದಿಂದಲೇ ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್ ಗಾಂಧಿ ಹಾಗೂ ಇತರರು ನನ್ನ ಪ್ರಕರಣದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ಆರಂಭಿಸಿದರು. ರಾಜಕೀಯ ಪಿತೂರಿ ಮಾಡಲಾರಂಭಿಸಿದರು. ನಾನು ಮಾನಸಿಕ ಖಿನ್ನತೆಗೆ ಒಳಗಾಗಿ, ಯಾರ ಸಂಪರ್ಕಕ್ಕೂ ಸಿಗದೇ ಉಳಿದುಕೊಂಡೆ. ಆದ್ದರಿಂದ, ನಾನು ಈಗ ಎಲ್ಲರ ಕ್ಷಮೆ ಕೋರುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಹಾಸನದಲ್ಲಿಯೂ ಕೆಲ ಶಕ್ತಿಗಳು ಒಟ್ಟಿಗೆ ಸೇರಿಕೊಂಡು ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡುತ್ತಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿದ್ದೇನೆ. ನನ್ನನ್ನು ಮುಗಿಸಬೇಕೆಂದು ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ’ ಎಂದು ಪ್ರಜ್ವಲ್ ಹೇಳಿದ್ದಾರೆ.

‘ಯಾರೂ ತಪ್ಪು ತಿಳಿದುಕೊಳ್ಳುವುದು ಬೇಡ. ನಾನೇ ಮೇ 31ರಂದು ಶುಕ್ರವಾರ ಎಸ್ಐಟಿ ಮುಂದೆ ಖುದ್ದಾಗಿ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ಸರಿಯಾದ ರೀತಿಯಲ್ಲಿ ಉತ್ತರ ಕೊಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಈ ಸುಳ್ಳು ಪ್ರಕರಣದಿಂದ ಹೊರಬರುವ ಕೆಲಸವನ್ನು ನ್ಯಾಯಾಲಯದ ಮೂಲಕ ಮಾಡುತ್ತೇನೆ. ದೇವರು, ಜನರ ಆಶೀರ್ವಾದ ಹಾಗೂ ನನ್ನ ಕುಟುಂಬದ ಆಶೀರ್ವಾದ ನನ್ನ ಮೇಲಿರಲಿ‌. ಖಂಡಿತವಾಗಿಯೂ ನಾನು ಮೇ 31ರಂದು ಶುಕ್ರವಾರ ಎಸ್ಐಟಿ ತನಿಖೆಗೆ ಹಾಜರಾಗುವ ಮೂಲಕ ಎಲ್ಲದಕ್ಕೂ ತೆರೆ ಎಳೆಯುವ ಕೆಲಸ ಮಾಡಲಿದ್ದೇನೆ. ನನ್ನ ಮೇಲೆ ನಂಬಿಕೆ ಇರಲಿ, ಎಲ್ಲರಿಗೂ ಧನ್ಯವಾದಗಳು’ ಎಂದೂ ಪ್ರಜ್ವಲ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ವಿಳಾಸ ಪತ್ತೆಗಾಗಿ ಎಸ್‌ಐಟಿ ತನಿಖೆ

ಪ್ರಜ್ವಲ್ ವಿಡಿಯೊ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಯಾವ ಸ್ಥಳದಿಂದ ವಿಡಿಯೊ ಮಾಡಲಾಗಿದೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ವಿಡಿಯೊ ಗಮನಿಸಲಾಗಿದೆ. ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಬಂಧನಕ್ಕೂ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದೆ. ವಿಡಿಯೊ ಬಗ್ಗೆ ಇಂಟರ್‌ಪೋಲ್‌ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು ನಿಖರ ಸ್ಥಳ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.