ಹಳೇಬೀಡು (ಹಾಸನ): ಸಮೀಪದ ಗೋಣಿ ಸೋಮನಹಳ್ಳಿ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ₹1.5 ಲಕ್ಷ ಮೌಲ್ಯದ ಟೊಮ್ಯಾಟೊ ಕಳವು ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಹೆಚ್ಚಾಗಿದ್ದು, ಇದೀಗ ಹೊಲದಲ್ಲಿ ಕಟಾವಿಗೆ ಬಂದಿದ್ದ ಟೊಮ್ಯಾಟೊ ಕಳವು ಮಾಡಲಾಗಿದೆ. ಬೆಳೆ ಕಳೆದುಕೊಂಡಿರುವ ಜಮೀನಿನ ಮಾಲೀಕ ಸೋಮಶೇಖರ್ ಅವರ ಪುತ್ರ ಧರಣಿ, ಹಳೇಬೀಡು ಠಾಣೆಯಲ್ಲಿ ದೂರು ನೀಡಿದ್ದಾರೆ.
ಧರಣಿ ಅವರ ತಂದೆ ಸೋಮಶೇಖರ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರೂ, ಜಮೀನಿನಲ್ಲಿ ಟೊಮ್ಯಾಟೊ ಕೃಷಿ ಮಾಡಿದ್ದರು. ಮೂರು ದಿನದಿಂದ ಟೊಮ್ಯಾಟೊ ಕೊಯ್ದು ಮಾರಾಟ ಮಾಡುತ್ತಿದ್ದರು. ಬಾಕಿ ಉಳಿದ ಟೊಮ್ಯಾಟೋ ಅನ್ನು ಬುಧವಾರ ಕಟಾವು ಮಾಡಲು ನಿರ್ಧರಿಸಿದ್ದರು.
ಆದರೆ, ಮಂಗಳವಾರ ರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು, ತಲಾ 50 ಕೆ.ಜಿ. ತೂಕದ 60 ಬ್ಯಾಗ್‌ನಷ್ಟು ಟೊಮ್ಯಾಟೊ ಅನ್ನು ಕದ್ದಿದ್ದಾರೆ. ಇದರ ಮೌಲ್ಯ ₹1.5 ಲಕ್ಷ ಎಂದು ಅಂದಾಜಿಸಲಾಗಿದೆ. ಬುಧವಾರ ಬೆಳಿಗ್ಗೆ ಧರಣಿ ಜಮೀನಿನ ಬಳಿ ಬಂದು ನೋಡಿದಾಗ, ಟೊಮ್ಯಾಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
‘ಮೂರು ವರ್ಷಗಳಿಂದ ಯಾವುದೇ ಬೆಳೆಗಳು ಕೈಹಿಡಿದಿರಲಿಲ್ಲ. ಈ ಬಾರಿ ಇದ್ದ ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದು, ಅರ್ಧದಷ್ಟು ಟೊಮ್ಯಾಟೊ ಕಳ್ಳರ ಪಾಲಾಗಿದೆ. ಅಲ್ಲದೇ ಟೊಮ್ಯಾಟೊ ಗಿಡಗಳನ್ನು ಮುರಿದು ಹಾಕಿದ್ದು, ಮುಂದೆ ಇಳುವರಿಯೂ ಸಿಗದಂತಾಗಿದೆ’ ಎಂದು ಸೋಮಶೇಖರ್ ಅವರ ಪತ್ನಿ ಪಾರ್ವತಮ್ಮ, ‘ಪ್ರಜಾವಾಣಿ’ ತಿಳಿಸಿದರು.
ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.