ಹಾಸನ: ನಗರದ ಹಾಸನಾಂಬೆಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತರನ್ನು ನಿಯಂತ್ರಿಸಲಾಗದ ಜಿಲ್ಲಾಡಳಿತ, ವಿಶೇಷ ದರ್ಶನದ ಟಿಕೆಟ್ ಹಾಗೂ ವಿಐಪಿ ಪಾಸ್‌ಗಳನ್ನು ರದ್ದುಗೊಳಿಸಿದೆ. ಈಗ ಎಲ್ಲ ಭಕ್ತರೂ ಒಂದೇ ಸರದಿಯಲ್ಲಿ ನಿಂತು ದರ್ಶನ ಪಡೆಯುವಂತಾಗಿದೆ.
‘ಲಕ್ಷಾಂತರ ವಿಐಪಿ ಪಾಸ್‌ಗಳನ್ನು ಬೇಕಾಬಿಟ್ಟಿ ವಿತರಿಸಲಾಗಿದ್ದು, ಎಲ್ಲರ ಕೈಗಳಲ್ಲೂ ಪಾಸ್‌ಗಳಿರುವುದೇ ಅವ್ಯವಸ್ಥೆಗೆ ಮುಖ್ಯ ಕಾರಣ’ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರ ಆಕ್ರೋಶವೂ ಭುಗಿಲೆದ್ದಿದ್ದು, ಗುರುವಾರ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದರು.
ಈ ಮಧ್ಯೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಪೌರಕಾರ್ಮಿಕರು, ದೇಗುಲದ ಸ್ವಚ್ಛತಾ ಕಾರ್ಯದಿಂದ ದೂರ ಉಳಿದರು.
ರೇವಣ್ಣ ಆಕ್ರೋಶ: ಈ ಸನ್ನಿವೇಶದ ಬಗ್ಗೆ, ಜಿಲ್ಲಾಧಿಕಾರಿ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎಚ್.ಡಿ. ರೇವಣ್ಣ, ತಲಾ ₹1 ಸಾವಿರ ವಿಶೇಷ ದರ್ಶನದ ಟಿಕೆಟ್ ಪಡೆದು ಕುಟುಂಬದವರೊಂದಿಗೆ ದೇವಿಯ ದರ್ಶನ ಪಡೆದರು.
‘ಪಾಸ್‌ಗಳನ್ನು ಮುದ್ರಿಸಲು ಜಿಲ್ಲಾಧಿಕಾರಿಗೆ ಯಾರು ಅಧಿಕಾರ ಕೊಟ್ಟರು? ಮುಖ್ಯ ಕಾರ್ಯದರ್ಶಿಗೆ ಹೇಳಿ, ಅಮಾನತು ಮಾಡಿಸುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡುತ್ತಾರೆ. ಇಲ್ಲಿನ ಅವ್ಯವಸ್ಥೆಯ ಕುರಿತು ಮುಖ್ಯ ಕಾರ್ಯದರ್ಶಿಗೆ ನಾನೇ ಪತ್ರ ಬರೆಯುತ್ತೇನೆ. ತಾಕತ್ತಿದ್ದರೆ, ಡಿಸಿ ವಿರುದ್ಧ ತನಿಖೆಗೆ ಆದೇಶಿಸಲಿ. ಇಲ್ಲವಾದರೆ, ಜಿಲ್ಲಾಧಿಕಾರಿಗೆ ಅವರೂ ಶರಣಾಗಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.