ADVERTISEMENT

ಸಕಲೇಶಪುರ ತಾಲ್ಲೂಕಿನಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ

ಜೀವ ನದಿ ಹೇಮಾವತಿ ಹಾಗೂ ಉಪ‍ ಹಳ್ಳಗಳಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:32 IST
Last Updated 25 ಜುಲೈ 2024, 15:32 IST
ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದ ಹಳ್ಳದಲ್ಲಿ ಪ್ರವಾಹ ಉಂಟಾಗಿ ಗುರುವಾರ ಸೇತುವೆ ಮೇಲೆ ನೀರು ಹರಿಯುತ್ತಿರುವುದು
ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದ ಹಳ್ಳದಲ್ಲಿ ಪ್ರವಾಹ ಉಂಟಾಗಿ ಗುರುವಾರ ಸೇತುವೆ ಮೇಲೆ ನೀರು ಹರಿಯುತ್ತಿರುವುದು   

ಸಕಲೇಶಪುರ: ತಾಲ್ಲೂಕಿನಾಧ್ಯಂತ ಗುರುವಾರ ಧಾರಾಕಾರವಾಗಿ ಮಳೆಯಾಗಿದ್ದು, ಜಿಲ್ಲೆಯ ಜೀವ ನದಿ ಹೇಮಾವತಿ ಒಳ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.

ಪಟ್ಟಣದ ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಬಾಗಿಲಿನವರೆಗೆ ನೀರು ಬಂದಿದ್ದು, ಆಜಾದ್‌ ರಸ್ತೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿದೆ. ಮಳಲಿ, ಹೆನ್ನಲಿ, ಆಚಂಗಿ ಸತ್ತಿಗಾಲ ಸೇರಿದಂತೆ ನದಿ ಪಾತ್ರದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ನಾಟಿ ಮಾಡಲು ಹಾಕಿದ್ದ ಸಸಿಮಡಿ, ನಾಟಿಗೆ ಉಳುಮೆ ಮಾಡಿದ್ದ ಭತ್ತದ ಗದ್ದೆಗಳಲ್ಲಿ 3–4 ಅಡಿ ನೀರು ನಿಂತಿದ್ದು, ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ.

ಮಠಸಾಗರ ಗ್ರಾಮದ ಕಿರು ಹಳ್ಳದಲ್ಲಿ ಪ್ರವಾಹ ಉಂಟಾಗಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಬರಲು ಕಷ್ಟವಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಟೋ ಒಂದರಲ್ಲಿ ಗ್ರಾಮಸ್ಥರು ಹೋಗುವಾಗ ಒಮ್ಮೆಲೇ ನೀರಿನ ಹರಿವು ಹೆಚ್ಚಾಗಿ, ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.

ADVERTISEMENT

ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಲಾಪುರ ಮಠ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಬುಧವಾರ ರಾತ್ರಿಯಿಂದ ಸೇತುವೆ ಮೇಲೆ ಮೂರು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಂದ ಬಂದು ಹೋಗುವುದಕ್ಕೆ ಸಮಸ್ಯೆ ಉಂಟಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಿಸಿದರು.

ಹಾರ್ಲೆ ಕೂಡಿಗೆಯಿಂದ ಕುಂಬರಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನುಡುವೆ ಹರಿಯುವ ಎತ್ತಿನಹಳ್ಳಕ್ಕೆ, ಸೇತುವ ಪಕ್ಕದಲ್ಲಿಯೇ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಅಳವಡಿಸಿದ್ದು, ಮಳೆ ನೀರಿನಲ್ಲಿ ಪೈಪ್‌ಲೈನ್ ಮುಚ್ಚಿದ ಮಣ್ಣು ಕೊಚ್ಚಿಹೋಗಿದೆ. 16 ಅಡಿ ಅಗಲದ ರಸ್ತೆ ಮಳೆ ನೀರಿನೊಂದಿಗೆ ಕೊರೆದುಕೊಂಡು 9 ಅಡಿಯಷ್ಟು ಕಿರಿದಾಗಿದೆ. ಕಾಂಕ್ರೀಟ್‌ ರಸ್ತೆಯ ತಳಭಾಗದಲ್ಲಿ ಮಣ್ಣು ಕೊರೆದುಕೊಂಡು ಹೋಗುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿಯೂ ರಸ್ತೆ ಕುಸಿಯುತ್ತದೆ ಎಂದು ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘುನಂದನ್‌ ತಿಳಿಸಿದರು.

ಜಾನೇಕೆರೆ ಗ್ರಾಮದ ಕಿರು ಹಳ್ಳದಲ್ಲಿ ಪ್ರವಾಹ ಉಂಟಾಗಿ, ಅಕ್ಕಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ.

ಉಪವಿಭಾಗಾಧಿಕಾರಿ ಭೇಟಿ:

ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಾ ತಗ್ಗು ಪ್ರದೇಶಗಳಿಗೆ ನೀರು ಹರಿಯುತ್ತಿರುವುದರಿಂದ ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ ಅಜಾದ್‌ ರಸ್ತೆ, ಮಳಲಿ ರಸ್ತೆ ಸೇರಿದಂತೆ ತಾಲ್ಲೂಕಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದರು. ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಳಜಿ ಕೇಂದ್ರ: ಪ್ರವಾಹದಿಂದ ಯಾವುದೇ ಕುಟುಂಬಗಳು ಸಮಸ್ಯೆ ಒಳಗಾದರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಯಾವುದೇ ಕುಟುಂಬಕ್ಕೆ ಸಮಸ್ಯೆ ಉಂಟಾದರೂ ಅಧಿಕಾರಿಗಳು, ಸಿಬ್ಬಂದಿ ಬರುವವವರೆಗೂ ಸ್ಥಳೀಯರು ಕಾಯದೇ, ತಕ್ಷಣ ಸಮೀಪದಲ್ಲಿ ಇರುವವರು ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದ್ದಾರೆ.

ಸಕಲೇಶಪುರ ತಾಲ್ಲೂಕಿನಾದ್ಯಂತ ಗುರುವಾರವೂ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಆಚಂಗಿ ಬಡಾವಣೆಯ ಭತ್ತದ ಗದ್ದೆಗಳು ಜಲಾವೃತಗೊಂಡಿರುವುದು. ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್ 
ಸಕಲೆಶಪುರ ತಾಲ್ಲೂಕಿನ ಸಂಕ್ಲಾಪುರ ಮಠ ಗ್ರಾಮದ ಹಳ್ಳದ ಪ್ರವಾಹದಿಂದ ಸೇತುವೆ ಮೇಲೆ ನೀರು ಹರಿಯುತ್ತಿರುವುದು
ಸಕಲೇಶಪುರದಲ್ಲಿ ಗುರುವಾರ ಮಧ್ಯಾಹ್ನ ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದುಹೋಗಿದ್ದು  ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್ 
ಸಕಲೇಶಪುರ ತಾಲ್ಲೂಕಿನ ಹಾರ್ಲೆ ಸಮೀಪ ಎತ್ತಿನಹಳ್ಳ ಸೇತುವೆ ಪಕ್ಕದಲ್ಲಿ ಎತ್ತಿನಹೊಳೆ ಪೈಪ್‌ಲೈನ್‌ ಮಳೆನೀರಿಯಿಂದ ಮಣ್ಣು ಕೊಚ್ಚಿಹೋಗಿ ಕಾಂಕ್ರೀಟ್‌ ರಸ್ತೆ ಬೀಳುವ ಸ್ಥಿತಿಯಲ್ಲಿದೆ

ಮನೆಯೊಳಗೆ ಉಕ್ಕುತ್ತಿದೆ ಜಲ ಜನ್ನಾಪುರ ಗ್ರಾಮದ ಲಕ್ಷ್ಮಿ ಚಂದ್ರಶೇಖರ್ ಅವರ ಮನೆಯೊಳಗಿಂದ ಜಲ ಉಕ್ಕಿ ಹರಿಯುತ್ತಿದ್ದು ಗೋಡೆಗಳು ಶಿಥಿಲಗೊಂಡು ಮನೆ ಅಪಾಯದಲ್ಲಿದೆ. ಹಾರ್ಲೆಕೂಡಿಗೆ ಗ್ರಾಮದ ಸವಿತಾ ಅವರ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ಸುಮಾರು ₹1 ಲಕ್ಷ ನಷ್ಟ ಉಂಟಾಗಿದೆ. ಇದೇ ಗ್ರಾಮದ ಸುಮತಿ ಅವರ ಮನೆಯ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಜಖಂಗೊಂಡಿದೆ.

ಸೆಲ್ಪಿ ಆತಂಕ ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಬಾಗಿಲಿನವರೆಗೂ ಹೇಮಾವತಿ ನೀರು ಬಂದಿದ್ದು ಜನರು ಪೋಟೋ ತೆಗೆಯುವುದು ನದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಪ್ರಮೋದ್‌ ಕುಮಾರ್ ಜೈನ್‌ ಯಾವುದೇ ಅನಾಹುತಗಳು ಆಗದಂತೆ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದ ಬಳಿ ನಿಯೋಜನೆ ಮಾಡಿದರು.

ಹೆದ್ದಾರಿಯ ಹಲವೆಡೆ ಗುಡ್ಡ ಕುಸಿತ ಸಕಲೇಶಪುರ–ಮಾರನಹಳ್ಳಿವರೆಗೆ ಹತ್ತಾರು ಕಡೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡಗಳು ಕುಸಿದಿವೆ. ಆದರೆ ಈ ಮಾರ್ಗದ ವಾಹನಗಳ ಸಂಚಾರಕ್ಕೆ ಅಂತಹ ತೊಂದರೆ ಆಗಿಲ್ಲ. ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸರು ಹೆದ್ದಾರಿ ಗಸ್ತು ನಿಯೋಜನೆ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.