ADVERTISEMENT

ಬಡಾವಣೆಗಳಿಗೆ ನುಗ್ಗಿದ ಹೇಮಾವತಿ ನದಿ ನೀರು

ಹೊಳೆನರಸೀಪುರ: 29 ಮನೆಗಳ ಜನರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:57 IST
Last Updated 26 ಜುಲೈ 2024, 16:57 IST
ಹೊಳೆನರಸೀಪುರ ರಿವರ್ ಬ್ಯಾಂಕ್ ರಸ್ತೆಯ ಯಾಸಿನ್ ನಗರದ ಮನೆಗಳಿಗೆ ಗುರುವಾರ ರಾತ್ರಿ ನೀರು ನುಗ್ಗಿದ್ದು, ಸಂಸದ ಶ್ರೇಯಸ್‌ ಪಟೇಲ್ ಶುಕ್ರವಾರ ಬೆಳಿಗ್ಗೆ ಬಡಾವಣೆಗಳಿಗೆ ತೆರಳಿ ಪರಿಶೀಲಿಸಿದರು. ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಹಾಜರಿದ್ದರು
ಹೊಳೆನರಸೀಪುರ ರಿವರ್ ಬ್ಯಾಂಕ್ ರಸ್ತೆಯ ಯಾಸಿನ್ ನಗರದ ಮನೆಗಳಿಗೆ ಗುರುವಾರ ರಾತ್ರಿ ನೀರು ನುಗ್ಗಿದ್ದು, ಸಂಸದ ಶ್ರೇಯಸ್‌ ಪಟೇಲ್ ಶುಕ್ರವಾರ ಬೆಳಿಗ್ಗೆ ಬಡಾವಣೆಗಳಿಗೆ ತೆರಳಿ ಪರಿಶೀಲಿಸಿದರು. ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಹಾಜರಿದ್ದರು   

ಹೊಳೆನರಸೀಪುರ: ಗೊರೂರು ಅಣೆಕಟ್ಟೆಯಿಂದ ಹೇಮಾವತಿ ನದಿಗೆ ಗುರುವಾರ ರಾತ್ರಿ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದು, ಪಟ್ಟಣದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯ ಯಾಸಿನ್ ನಗರದ 29 ಮನೆಗಳಿಗೆ, ಚನ್ನರಾಯಪಟ್ಟಣ ರಸ್ತೆಯ ಕುವೆಂಪು ಬಡಾವಣೆಯ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯ ಮುಂಜಾಗ್ರತಾ ಕ್ರಮದಿಂದಾಗಿ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಚನ್ನರಾಯಪಟ್ಟಣಕ್ಕೆ ಹೋಗುವ ರಸ್ತೆ ಹಾಗೂ ಅರಕಲಗೂಡು ರಸ್ತೆಯಲ್ಲಿ ನೀರು ನಿಂತಿದ್ದು, ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಆಗಿದೆ. ಅರಕಲಗೂಡು ರಸ್ತೆಯ ನದಿ ದಡದಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದ್ದು, ಅವರನ್ನೆಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದಾರೆ.

ADVERTISEMENT

‘ಹೇಮಾವತಿ ಜಲಾಶಯದಿಂದ ನೀರು ಬಿಡುವ ಬಗ್ಗೆ ಮೊದಲೇ ನಮಗೆ ಮಾಹಿತಿ ನೀಡಿದ್ದರಿಂದ ನದಿ ಪಾತ್ರದ ಮನೆಗಳ ಜನರನ್ನು ನೀರು ಬಿಡುವ ಮೊದಲೇ ಟಿಪ್ಪು ಶಾದಿಮಹಲ್, ಜೆ.ಎಂ. ಕಲ್ಯಾಣ ಮಂಟಪ, ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಿ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ಆದರೆ ಯಾರಿಗೂ ತೊಂದರೆ ಆಗಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ವಿವರಿಸಿದರು.

ಶುಕ್ರವಾರ ಬೆಳಿಗ್ಗೆ ಹಾನಿಗೊಳಗಾದ ಬಡಾವಣೆಗಳಿಗೆ ಭೇಟಿ ನೀಡಿದ ಸಂಸದ ಶ್ರೇಯಸ್‌ ಪಟೇಲ್, ‘ನದಿ ಪಾತ್ರದಲ್ಲಿ ವಾಸ ಮಾಡುವ ಜನರಿಗೆ ಬೇರೆ ಬಡಾವಣೆ ನಿರ್ಮಿಸಿಕೊಡಿ. ಈ ಬಗ್ಗೆ ನಾನೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ’ ಎಂದು ಸ್ಥಳದಲ್ಲಿ ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.

‘ಮನೆಗೆ ನೀರು ನುಗ್ಗಿ ಪಾತ್ರೆ, ಬಟ್ಟೆ ಬರೆ ನಷ್ಟವಾಗಿದ್ದರೆ, ಒಬ್ಬರಿಗೆ ₹5,500 ನೀಡಲು ಅವಕಾಶ ಇದೆ’ ಎಂದು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ತಿಳಿಸಿದರು.

‘ತಕ್ಷಣ ನೀಡಿ ಪರಿಹಾರ ನೀಡಿ’ ಎಂದು ಶ್ರೇಯಸ್‌ ಸೂಚನೆ ನೀಡಿದರು. ಇದೇ ರೀತಿ ಪಟ್ಟಣದ ಕುವೆಂಪು ಬಡಾವಣೆಯ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಪರಿಶೀಲನೆ ನಡೆಸಿದರು.

ಹೊಳೆನರಸೀಪುರದ ಕುವೆಂಪು ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು

ತುಂಬಿದ ಹೇಮೆ: ಜನರ ವೀಕ್ಷಣೆ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ಸೇತುವೆಯ ಕೆಳಭಾಗಕ್ಕೆ ನೀರು ತಾಗುತ್ತಿದೆ. ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದ ಸೋಪಾನ ಕಟ್ಟೆ ಸಂಪೂರ್ಣ ಮುಳುಗಿ ರಸ್ತೆಗೆ ನೀರು ನುಗ್ಗುತ್ತಿದೆ. ಇದನ್ನು ನೋಡಲು ಜನರು ತಂಡೋಪತಂಡವಾಗಿ ಹೋಗುತ್ತಿದ್ದಾರೆ. 1999ರಲ್ಲಿ ಹಾಗೂ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ರೀತಿ ಹಾನಿ ಆಗಿತ್ತು ಎಂದು ಹಿರಿಯರು ನೆನಪಿಸಿಕೊಂಡರು. ‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಬಿದ್ದಿದ್ದು ಹಾನಿಗೊಳಗಾದ ಮನೆಗಳ ಮಾಲೀಕರು ಸೂಕ್ತ ದಾಖಲೆಗಳನ್ನು ನೀಡಿದರೆ ಪರಿಹಾರ ದೊರಕಿಸಿಕೊಡಲು ನಿಯಮದಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.