ಸಕಲೇಶಪುರ (ಹಾಸನ): ಏಪ್ರಿಲ್ ಮೂರನೇ ವಾರವಾದರೂ ಮಲೆನಾಡಿನಲ್ಲಿ ಮಳೆ ಇಲ್ಲ. ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.
‘ಜಿಲ್ಲೆಯ ಜೀವ ನದಿ ಹೇಮಾವತಿ ಒಡಲು ಇದೇ ಮೊದಲಿಗೆ ಇಷ್ಟೊಂದು ಪ್ರಮಾಣದಲ್ಲಿ ಬರಿದಾಗಿದೆ’ ಎಂದು ಪಟ್ಟಣದ ಹಿರಿಯರು ಹೇಳುತ್ತಿದ್ದಾರೆ. ಮೂಡಿಗೆರೆಯಲ್ಲಿ ಹುಟ್ಟಿದರೂ ಬಹುತೇಕ ಸಕಲೇಶಪುರ ತಾಲ್ಲೂಕಿನ ಅಂಜುಗೋಡನಹಳ್ಳಿಯಿಂದ ಮಾಗಲುವರೆಗೂ ಸುಮಾರು 80 ಕಿ.ಮೀ. ಹರಿಯುವ ನದಿಯಲ್ಲಿ ನೀರಿನ ಹರಿವು ಸಂಪೂರ್ಣವಾಗಿ ನಿಂತು ಹೋಗಿದೆ.
ಮಾರ್ಚ್ ಮೊದಲ ವಾರದಿಂದ ಏಪ್ರಿಲ್ ಎರಡನೇ ವಾರದ ಒಳಗೆ ವಾಡಿಕೆಯಂತೆ ಕನಿಷ್ಠ 8 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ ಇದುವರೆಗೆ ಕೇವಲ 2.2 ಸೆಂ.ಮೀ. ಮಳೆಯಾಗಿದೆ. ಇದರಿಂದಾಗಿ, ತಾಲ್ಲೂಕಿನಾದ್ಯಂತ ಎಲ್ಲ ಕೆರೆ–ಕಟ್ಟೆಗಳು, ಹಳ್ಳ, ಝರಿ, ಜಲಪಾತಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದು ನೀರಿನ ಕೊರತೆ ಉಂಟಾಗಿದೆ.
ಎರಡು ದಿನಕ್ಕೊಮ್ಮೆ ನೀರು: ಸಕಲೇಶಪುರ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಪಟ್ಟಣದ 23 ವಾರ್ಡ್‌ಗಳಿಗೂ ಹೇಮಾವತಿ ನದಿಯಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಹೆನ್ನಲಿ ಬಳಿ ನದಿಗೆ ನಿರ್ಮಿಸಿರುವ ಜಾಕ್‌ವೆಲ್‌ನಲ್ಲಿ ಕೇವಲ 2.5 ಅಡಿಯಷ್ಟೆ ನೀರಿದ್ದು, ನದಿಯಲ್ಲಿ ನೀರಿನ ಹರಿವು ನಿಂತಿದೆ. ತಗ್ಗು ಪ್ರದೇಶದಲ್ಲಿರುವ ನೀರನ್ನು ಪಟ್ಟಣಕ್ಕೆ ಪೂರೈಸಲಾಗುತ್ತಿದೆ.
‘ಸದ್ಯದ ಪರಿಸ್ಥಿತಿಯಲ್ಲಿ ಸುಮಾರು 40 ದಿನಕ್ಕೆ ಮಾತ್ರ ನೀರು ಸಾಕಾಗುತ್ತದೆ. ನಿತ್ಯ ನೀರು ಕೊಟ್ಟರೆ 20 ದಿನಗಳಲ್ಲಿ ಸಂಪೂರ್ಣ ಖಾಲಿಯಾಗಿ ಸಮಸ್ಯೆ ಉಂಟಾಗುತ್ತದೆ’ ಎಂದು ಪುರಸಭಾ ಮುಖ್ಯಾಧಿಕಾರಿ ಎಚ್.ಆರ್. ರಮೇಶ್ ‘ಪ್ರಜಾವಾಣಿ’ ಗೆ ತಿಳಿಸಿದರು.
ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಲ್ಲಿ 9.899 ಟಿಎಂಸಿ ನೀರು ಸಂಗ್ರಹವಿದ್ದು, 5.527 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಾಗುತ್ತದೆ ಅದನ್ನು ಹಾಸನ, ತುಮಕೂರು ಜಿಲ್ಲೆಯ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಬಳಕೆ ಮಾಡಬೇಕಿದೆ.
ಪುರಸಭೆ ವ್ಯಾಪ್ತಿಯಲ್ಲಿ 9 ಹ್ಯಾಂಡ್ ಪಂಪ್‌ಗಳಿಗೆ ಮೋಟಾರ್ ಅಳವಡಿಸಲಾಗಿದೆ. ಕೊರತೆ ಹೆಚ್ಚಾದರೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುವುದು ಡಾ.ಎಂ.ಕೆ. ಶ್ರುತಿ ಪುರಸಭೆ ಆಡಳಿತಾಧಿಕಾರಿ ಸಕಲೇಶಪುರ ಉಪ ವಿಭಾಗಾಧಿಕಾರಿ
ಹೇಮಾವತಿ ನದಿ ನೀರಿನ ಹರಿವು ನಿಂತಿದ್ದರೂ ಪುರಸಭೆಯಿಂದ ವ್ಯವಸ್ಥಿತವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಚನ್ನವೇಣಿ ಎಂ. ಶೆಟ್ಟಿ ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ
ವಾಹನ ತೊಳೆಯುವುದು ಮನೆ ಅಂಗಡಿ ಮುಂದಿನ ರಸ್ತೆಗೆ ಅನಗತ್ಯ ನೀರು ಹಾಕುವುದನ್ನು ಬಿಡಬೇಕು. ನೀರಿನ ಅಭಾವ ಉಂಟಾಗದಂತೆ ಜನ ಸಹಕರಿಸಬೇಕು ನರ್ತನ್ ಬೈರಮುಡಿ ಪುರಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.