ಆಲೂರು: ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಜಮೀನಿಗೆ ಪೋಡಿ ಮಾಡಿಸಿ, ದುರಸ್ತಿ ಹಾಗೂ ಹಕ್ಕು-ಬಾಧ್ಯತೆ ಪತ್ರ ನೀಡಲು ತಾಲ್ಲೂಕು ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಸಂತ್ರಸ್ತರು ಬುಧವಾರ ಪಟ್ಟಣದ ಮಿನಿ ವಿದಾನಸೌಧದ ಕಂದಾಯ ಹಾಗೂ ಭೂ ಮಾಪನ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಜಲಾಶಯ ಸಂತ್ರಸ್ತರಿಗೆ ಬ್ಯಾಬ ಪಾರೆಸ್ಟ್ ಹಾಗೂ ಇತರೆ ಕಡೆಗಳಲ್ಲಿ ಜಮೀನು ನೀಡಿ 50 ವರ್ಷ ಕಳೆದರೂ, ಜಮೀನಿಗೆ ಯಾವುದೇ ಹಕ್ಕು-ಬಾಧ್ಯತೆ ದಾಖಲೆ ಪತ್ರ ನೀಡಿಲ್ಲ ಎಂದು. ಹಿಂದಿನ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಆರ್.ಅಶೋಕ್ ಅವರು ವಿಧಾನಸಭೆ ಅದಿವೇಶನದಲ್ಲಿ ಜಮೀನಿಗೆ ಸಂಬಂಧಪಟ್ಟಂತೆ ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಿ ಕೆಲಸ ಮಾಡಿಕೊಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಂತ್ರಸ್ತರು ಅಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಎಂ. ಕೃಷ್ಣ ಮಾತನಾಡಿ, 1970 ರ ದಶಕದಲ್ಲಿ ಹೇಮಾವತಿ
ಜಲಾಶಯ ಪೂರ್ಣಗೊಂಡಾಗ ಮುಳುಗಡೆಯಾದ ಆಲೂರು, ಅರಕಲಗೂಡು ಹಾಸನ ಮತ್ತು ಸಕಲೇಶಪುರ
ತಾಲ್ಲೂಕುಗಳ 40 ಗ್ರಾಮಗಳ 10 ಸಾವಿರ ಕುಟುಂಬಗಳ ಮುಳುಗಡೆ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿತ್ತು. ಅವರಿಗೆ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ತಹಶಿಲ್ದಾರ್ ಪ್ರಾಣೇಶ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬ್ಯಾಬ ಪಾರೆಸ್ಟ್ ಇತರೆ ಕಡೆಗಳಲ್ಲಿ ನೀಡಿರುವ ಜಮೀನನ್ನು ಸಾಮೂಹಿಕವಾಗಿ ಸರ್ವೆ ಮಾಡಿಸಿ ಅರ್ಹ ಪಲಾನುಭವಿಗಳಿಗೆ ಜಮೀನು ದುರಸ್ತಿ ಮಾಡಿಸಿ ಹಕ್ಕು-ಬಾಧ್ಯತೆ ದಾಖಲೆ ಪತ್ರ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಗೌಡ ಮಾತನಾಡಿ ಮುಳುಗಡೆ ಸಂತ್ರಸ್ತರು ಅಧಿಕಾರಿಗಳಲ್ಲಿ ಬಳಿ ಭಿಕ್ಷೆ ಬೇಡುತ್ತಿಲ್ಲ ಅವರ ಹಕ್ಕನ್ನು ಕೇಳುತ್ತಿದ್ದಾರೆ. 50 ವರ್ಷಗಳ ಹಿಂದೆ ಬೇರೆ ಜಿಲ್ಲೆಯ ಜನರಿಗಾಗಿ ತಮ್ಮ ಜಮೀನು ಬಿಟ್ಟು ಕೊಟ್ಟು ಇಲ್ಲಿ ಗೆಡ್ಡೆ-ಗೆಣಸು ಕಿತ್ತುಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರ ನೀಡಿರುವ ಜಮೀನಿನಲ್ಲಿ ಉತ್ತು-ಬಿತ್ತಿ ತಿನ್ನುವುದು ಬಿಟ್ಟು ಬೇರೆ ಯಾವುದೇ ಅನುಕೂಲ ಮಾಡಲು ಸಾದ್ಯವಾಗುತ್ತಿಲ್ಲ. ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದರು.
ಮುಳುಗಡೆ ಸಂತ್ರಸ್ತರಾದ ಕೃಷ್ಣೇಗೌಡ, ಗ್ರಾ.ಪಂ. ಸದಸ್ಯ ಗಣೇಶ್, ನಂಜುಂಡಪ್ಪ, ಜಯರಾಮ್, ಮಂಜೇಗೌಡ ಮತ್ತು ಸಂತ್ರಸ್ತರು ಭಾಗವಹಿಸಿದ್ದರು.
Cut-off box - ಅಹೋರಾತ್ರಿ ಧರಣಿ: ಎಚ್ಚರಿಕೆ ‘ದಶಕಗಳ ಹಿಂದೆ ಭೂ ಮಂಜೂರಾತಿ ನೀಡಿದಂತಹ ಕಡತಗಳು ಹಾಗೂ ದಾಖಲೆಗಳು ಸಂಬಂಧಪಟ್ಟ ಕಂದಾಯ ಇಲಾಖೆಯಲ್ಲಿ ನಾಪತ್ತೆಯಾಗಿದ್ದು ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ. ಕಡತಗಳ ನಾಪತ್ತೆಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಜಮೀನಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸ್ಳಲಾಗುವುದು ಎಂದು ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಎಂ. ಕೃಷ್ಣ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.