ಬೇಲೂರು: ಡಾ.ವಿಷ್ಣು ಶ್ರೀಧರ್ ವಾಕಣಕರ್ ಜನ್ಮ ಶತಮಾನೋತ್ಸವದ ಅಂಗವಾಗಿ ಸಂಸ್ಕಾರ ಭಾರತೀ ವತಿಯಿಂದ ಇಲ್ಲಿ ಶನಿವಾರ ಏರ್ಪಡಿಸಿದ್ದ ‘ನಮ್ಮ ನಡಿಗೆ ಕಲೆಗಳ ಕಡೆಗೆ’ ಕಾರ್ಯಕ್ರಮ ಯಶಸ್ವಿಯಾಯಿತು.
ಹಾಸನ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಜನರು ಬೇಲೂರು ಪಟ್ಟಣದ ಪಾರಂಪರಿಕ ಸ್ಥಳಗಳನ್ನು ನಡಿಗೆ ಮೂಲಕ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಸಂಸ್ಕಾರ ಭಾರತೀಯ ಹಿರಿಯ ಸಾಧಕ ಬಾಬಾ ಯೋಗೀಂದ್ರ ಜೀ ಚನ್ನಕೇಶವ ದೇಗುಲದ ಬಳಿ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು.
ಸಂಶೋಧಕ ಡಾ.ಶ್ರೀವತ್ಸ ಎಸ್. ವಟಿ ಅವರ ಮಾರ್ಗದರ್ಶನದಲ್ಲಿ ಚನ್ನಕೇಶವ ದೇಗುಲದ ಮುಂಭಾಗದಿಂದ ಹೊರಟ ಪಾರಂಪರಿಕ ನಡಿಗೆ ಸಂಸ್ಕೃತ ಭವನ, ಶಂಕರಮಠ, ಕಲ್ಲುಚಾವಡಿ ಮಂಟಪ, ಕೆರೆಬೀದಿ ಮೂಲಕ ತೆಪ್ಪದ ಕೊಳ, ವಿಷ್ಣು ಸಮುದ್ರ, ಅಮೃತೇಶ್ವರ ದೇವಾಲಯ, ಪಾತಾಳೇಶ್ವರ ದೇವಾಲಯ, ಮಾಧ್ಯಮಿಕ ಶಾಲೆ, ಶಂಕರೇಶ್ವರ ದೇವಾಲಯ, ನಂಜುಂಡೇಶ್ವರ ದೇವಾಲಯದ ಮೂಲಕ ಚನ್ನಕೇಶವ ದೇವಾಲಯದ ಬಳಿ ಪಾರಂಪರಿಕ ನಡಿಗೆ ಮುಕ್ತಾಯವಾಯಿತು.
ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಚಿತ್ರನಟ ಸುನೀಲ್ ಪುರಾಣಿಕ್, ಸಂಸ್ಕಾರ ಭಾರತಿಯ ಪ್ರಾಂತ್ಯ ಕಾರ್ಯದರ್ಶಿ ಹರಿಹರಪುರ ಶ್ರೀಧರ್, ಸ್ವಾಗತ ಸಮಿತಿ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಕಾರ್ಯದರ್ಶಿ ರಮೇಶ್‌ಬಾಬು, ಬೇ.ಸು.ಕೃಷ್ಣಶೆಟ್ಟಿ, ಸಂಶೋಧಕ ಜಿ.ಟಿ.ಭಟ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಟಿ.ಎ.ಶ್ರೀನಿಧಿ ಮತ್ತಿತರರು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದರು.
ಉದ್ಯಮಗಳಾದ ಶಿಕ್ಷಣ ಸಂಸ್ಥೆಗಳು: ವಿಷಾದ
‘ಸಂಸ್ಕಾರವನ್ನು ಕಲಿಸಬೇಕಾದ ಶಿಕ್ಷಣ ಸಂಸ್ಥೆಗಳು ಇಂದು ಉದ್ಯಮಗಳಾಗಿ ಪರಿವರ್ತನೆಯಾಗಿವೆ. ಶೇ 90ರಷ್ಟು ಶಿಕ್ಷಣ ಸಂಸ್ಥೆಗಳು ಸಂಸ್ಕಾರ ರಹಿತವಾಗಿ ಕೆಲಸ ಮಾಡುತ್ತಿವೆ’ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
‘ನಮ್ಮ ನಡಿಗೆ ಕಲೆಗಳ ಕಡೆಗೆ’ ನಂತರ ಚನ್ನಕೇಶವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಸ್ಥೆಗಳು ವಿದ್ಯಾರ್ಥಿಗಳನ್ನು ಇಂದು ಕೇವಲ ಅಲಂಕಾರಿಕ ವಸ್ತುಗಳನ್ನಾಗಿಸುತ್ತಿವೆ. ಸಂಸ್ಕಾರ ಕಲಿಸುತ್ತಿಲ್ಲ. ಯಾವ ವಿದ್ಯಾರ್ಥಿಗೆ ಸಂಸ್ಕಾರ ಇಲ್ಲವೋ ಅಂತಹ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗಿ ದೇಶಕ್ಕೆ ಕಂಟಕ ಪ್ರಾಯರಾಗಿದ್ದಾರೆ’ ಎಂದು ವಿಷಾದಿಸಿದರು.
ಶಾಸಕ ಕೆ.ಎಸ್.ಲಿಂಗೇಶ್ ‘ದೇಶದಲ್ಲಿ ಅನಾಗರಿಕತೆ ಹೆಚ್ಚಾಗುತ್ತಿದೆ. ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣವಾಗಿದೆ. ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳಿಗೆ ಕಲಿಸಿದರೆ, ಅವರು ಮುಂದೆ ದೇಶದ ಸತ್ಪ್ರಜೆಗಳಾಗುತ್ತಾರೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಕಾರ ಭಾರತೀ ಹೊರತಂದ ‘ಕಲಾ ತಪಸ್ವಿ’ ಪುಸ್ತಕವನ್ನು ಬಾಬಾ ಯೋಗೀಂದ್ರ ಜೀ ಬಿಡುಗಡೆ ಮಾಡಿದರು.
ಸಂಸ್ಕಾರ ಭಾರತೀಯ ಸದಸ್ಯರಾದ ಕಾರ್ತಿಕ್, ಗೌತಮ್, ಸುನಂದಾ ಅವರು ಚನ್ನಕೇಶವ ದೇವಾಲಯ, ಪಾತಾಳೇಶ್ವರ ದೇವಾಲಯ, ಸೀತಾರಾಮಂಜನೇಯ ದೇವಾಲಯ, ನಂಜುಂಡೇಶ್ವರ ದೇವಾಲಯದ ಬಳಿ ಬಿಡಿಸಿದ್ದ ರಂಗೋಲಿ ನೋಡುಗರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.