ಹಿರೀಸಾವೆ: ಕೋತಿಯೊಂದು 8 ಜನರಿಗೆ ಕಚ್ಚಿರುವ ಘಟನೆ ಸೋಮವಾರ ಹಿರೀಸಾವೆಯ ನುಗ್ಗೇಹಳ್ಳಿ ರಸ್ತೆಯಲ್ಲಿ ನಡೆದಿದೆ.
ಶ್ರೀಮತಿ ಸುಶೀಲಮ್ಮ ಗಂಗಾಧರ್ ಕಲ್ಯಾಣ ಮಂಟಪದಲ್ಲಿ ಒಳಗೆ ಹೋಗಿ, ವಿವಾಹ ನಡೆಯುತ್ತಿದ್ದಾಗ ವರನ ಪಕ್ಕ ಕುಳಿತಿದೆ, ನಂತರ ಊಟದ ಕೊಣೆಗೆ ಹೋಗಿ, ಊಟಕ್ಕೆ ಕೂತಿದ್ದವರ ಪಕ್ಕದ ಚೇರ್, ಟೇಬಲ್ ಮೇಲೆ ಕೂತು ಎಲೆಗೆ ಹಾಕಿದ್ದ ಆಹಾರಗಳನ್ನು ತಿಂದಿದೆ. ಈ ಸಮಯದಲ್ಲಿ ಮದುವೆಗೆ ಬಂದಿದ್ದ 5 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಮದುವೆಯಲ್ಲಿ ಭಾಗವಹಿಸಿದ್ದ ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ ಮತ್ತು ಏಳು ವರ್ಷದ ಮಂಜುಶ್ರೀ ಎಂಬ ಬಾಲಕಿ ಗಾಯಗೊಂಡಿದ್ದಾರೆ.
ಅಲ್ಲಿಂದ ಹೊರ ಬಂದ ಕೋತಿಯೂ ಆದೇ ರಸ್ತೆಯಲ್ಲಿ ಹಿಟ್ಟಿನ ಗಿರಣಿಗೆ ನುಗ್ಗಿ, ಹೊನ್ನೇನಹಳ್ಳಿಯ ಗೀರಿಗೌಡರ ಕಾಲಿಗೆ ಕಚ್ಚಿದೆ. ತಿಮ್ಮೇಗೌಡ ಎಂಬುವರಿಗೂ ಕಚ್ಚಿ ಗಾಯಗೊಳಿಸಿದೆ. ವಧು–ವರ ಹೊರಡುವ ಸಮಯಕ್ಕೆ ಪುನಹ ಕಲ್ಯಾಣ ಮಂಟಪಕ್ಕೆ ಬಂದು, ಶಾಸ್ತ್ರಗಳನ್ನು ಮಾಡಲು ಅಡ್ಡಿಪಡಿಸಿದೆ.
ಇವೆರೆಲ್ಲರೂ ಹಿರೀಸಾವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಲ್ಕು ಜನರಿಗೆ ತೀವ್ರವಾದ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆ ಆಗತ್ಯ ಇದ್ದು, ಹಾಸನ ಮತ್ತು ಆದಿಚುಂಚನಗಿರಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಡಾ. ಭರತ್ ‘ಪ್ರಜಾವಾಣಿ’ಗೆ ತಿಳಿಸಿದರು. ದಾರಿಯಲ್ಲಿ ಸಿಕ್ಕ ಬೈಕ್, ಕಾರಿನ ಮೇಲೆ ಕೂರುತ್ತಿದೆ. ಜನರು ಪಕ್ಕ ಕೂಳಿತಾಗ ಗಾಬರಿಯಾಗದಿದ್ದರೆ, ಗಲಾಟೆ ಮಾಡದಿದ್ದರೆ ಕೋತಿ ಯಾರಿಗೂ ತೊಂದರೆ ಮಾಡಿಲ್ಲ.
ಯಾರೋ ಸಾಕಿ, ಬೀದಿಗೆ ಬಿಟ್ಟಿರುವ ಕೋತಿಯಾಗಿರಬಹುದು ಎಂದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.