ADVERTISEMENT

ಹೊಳೆನರಸೀಪುರ | ಅರ್ಧ ಶತಮಾನ ಕಳೆದರೂ ಸಿಗದ ಹಕ್ಕುಪತ್ರ: ನಿವಾಸಿಗಳ ಪರದಾಟ

63 ಮನೆಗೆ ದಾಖಲೆಗಳೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 5:05 IST
Last Updated 27 ಅಕ್ಟೋಬರ್ 2024, 5:05 IST
<div class="paragraphs"><p>ದಾಖಲೆಗಳೇ ಇಲ್ಲದ ಹೊಳೆನರಸೀಪುರ ತಾಲ್ಲೂಕಿನ ತೆವಡಿಹಳ್ಳಿ ಗ್ರಾಮದ 63 ಮನೆಗಳು</p></div>

ದಾಖಲೆಗಳೇ ಇಲ್ಲದ ಹೊಳೆನರಸೀಪುರ ತಾಲ್ಲೂಕಿನ ತೆವಡಿಹಳ್ಳಿ ಗ್ರಾಮದ 63 ಮನೆಗಳು

   

ಹೊಳೆನರಸೀಪುರ: ತಾಲ್ಲೂಕಿನ ಮೂಡಲಹಿಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವಡಹಳ್ಳಿ ಬಾರೆ ಮೇಲೆ 63 ಮನೆಗಳಲ್ಲಿ ಜನರು ವಾಸವಿದ್ದಾರೆ. ಗ್ರಾಮದ ಜನರು ಮನೆಗಳ ಜಾಗಕ್ಕೆ ಕಂದಾಯ ಕಟ್ಟುತ್ತಿದ್ದಾರೆ. ರಸ್ತೆ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಎಲ್ಲವೂ ಇದೆ. ಆದರೆ ಇಲ್ಲಿರುವ ಯಾವುದೇ ಮನೆಗಳಿಗೆ ದಾಖಲೆ ಹಾಗೂ ಹಕ್ಕು ಪತ್ರ ಮಾತ್ರ ಇದುವರೆಗೆ ಸಿಕ್ಕಿಲ್ಲ!

ಶೀತಪೀಡಿತ ಎಂದು 1972 ರಲ್ಲಿ ತೆವಡಹಳ್ಳಿ ಗ್ರಾಮ ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು. ಶೀತಪೀಡಿತವಾಗಿ ಬೀಳುವ ಹಂತದಲ್ಲಿದ್ದ ಮನೆಗಳಲ್ಲಿ ವಾಸವಿದ್ದ ಜನರಿಗೆ, ಸಮೀಪದ ಬಾರೆ ಮೇಲೆ ಅಂದಿನ ಅಧಿಕಾರಿಗಳು 5.25 ಎಕರೆ ಜಾಗ ತೋರಿಸಿದ್ದರು. ಅಲ್ಲಿ ಹೋಗಿ ಮನೆಕಟ್ಟಿಕೊಳ್ಳಿ ಎಂದಿದ್ದರಂತೆ.

ADVERTISEMENT

‘ಅಂದಿನ ಅಧಿಕಾರಿಗಳ ಸೂಚನೆ ಮೇರೆಗೆ ಅನೇಕರು 45 ವರ್ಷಗಳ ಹಿಂದೆ ಬಾರೆ ಮೇಲೆ ಬಂದು ಮನೆ ಕಟ್ಟಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಂದಿನಿಂದ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾರೆ. ಗ್ರಾಮದ ಒಳಗೆ ಉತ್ತಮವಾದ ರಸ್ತೆ ಇದೆ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪದ ವ್ಯವಸ್ಥೆ ಚೆನ್ನಾಗಿದೆ. ಆದರೆ ಇದುವರೆಗೆ ಈ ಮನೆಗಳಿಗೆ ಯಾವುದೇ ರೀತಿಯ ಹಕ್ಕುಪತ್ರ ಕೊಟ್ಟಿಲ್ಲ’ ಎಂದು ಗ್ರಾಮದ ಯುವಕ ಮಹೇಶ್ ತಿಳಿಸಿದ್ದಾರೆ.

‘ನಾವು ಮನೆ ಕಟ್ಟಿಕೊಳ್ಳಲು ಯೋಚಿಸುತ್ತಿದ್ದೇವೆ. ದಾಖಲೆ ಇಲ್ಲದ ಕಾರಣ ನಮ್ಮ ಮನೆಗೆ ಯಾರೂ ಕೂಡ, ಯಾವುದೇ ಬ್ಯಾಂಕ್‌ನಲ್ಲೂ ಸಾಲ ಸಿಗುತ್ತಿಲ್ಲ’ ಎಂದು ಗ್ರಾಮದ ಅವಂತೇಶ್ ಪ್ರಜಾವಾಣಿಯೊಂದಿಗೆ ಅಳಲು ತೋಡಿಕೊಂಡರು.

ನಾವು ಕಂದಾಯ ಕಟ್ಟಿರುವ ರಶೀದಿಯೊಂದಿಗೆ ಅನೇಕ ಬಾರಿ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿಗೆ ಅಲೆದು ಸುಸ್ತಾಗಿದ್ದೇವೆ. ಇನ್ನೂ ನಮಗೆ ಹಕ್ಕುಪತ್ರ ಸಿಕ್ಕಲ್ಲ.
ಅವಂತೇಶ್, ಗ್ರಾಮದ ಯುವಕ

‘ಹಕ್ಕುಪತ್ರ ನೀಡಲು ಕ್ರಮ’

ಈ ಬಗ್ಗೆ ಗ್ರಾಮದ ಕೆಲವು ಯುವಕರು ಅರ್ಜಿ ನೀಡಿದ್ದಾರೆ. ಈ ಗ್ರಾಮದ ಜನರು ಸರ್ಕಾರ ತೋರಿಸಿದ ಜಾಗಕ್ಕೆ ಕಂದಾಯ ಕಟ್ಟುತ್ತಿದ್ದು, ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಈಗ ನಿಯಮದಂತೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಕ್ರಮಕ್ಕಾಗಿ ವಿನಂತಿಸುತ್ತೇವೆ ಎಂದು ತಾಲೂಕು ಪಂಚಾಯಿತಿ ತಾಂತ್ರಿಕ ಅಧಿಕಾರಿ ಗೋಪಾಲ್ ತಿಳಿಸಿದ್ದಾರೆ.

ನಿಯಮದಂತೆ ಹಕ್ಕುಪತ್ರ

ತೆವಡಳ್ಳಿ ಬಾರೆ ಮೇಲೆ ವಸತಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಹೆಚ್ಚು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಇವರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುತ್ತಿದೆ. ಎಲ್ಲರಿಗೂ ನಿಯಮದಂತೆ ಹಕ್ಕುಪತ್ರ ನೀಡಿ ಹೆಚ್ಚುವರಿ ಜಾಗವನ್ನು ಸರ್ಕಾರ ಹಿಂದಕ್ಕೆ ಪಡೆಯುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಜಯಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.