ಬೇಲೂರು: ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಸಂಕೇನಹಳ್ಳಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಮನೆ ಕುಸಿದ್ದು ಬಿದ್ದು 3 ಹಸುಗಳು ಮೃತಪಟ್ಟಿವೆ.
ಮನೆಯಲ್ಲಿ ಅಣ್ಣಪ್ಪಶೆಟ್ಟಿ ಹಾಗೂ ಅವರ ಪತ್ನಿ ರತ್ನಮ್ಮ, ತಾಯಿ ದ್ಯಾವಮ್ಮ ವಾಸಿಸುತ್ತಿದ್ದು ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಯಲ್ಲಿ 3 ಹಸುಗಳಿದ್ದವು. ಕೊಟ್ಟಿಗೆ ಹಾಗೂ ಮನೆಯ ಗೊಡೆಗಳು ಕುಸಿದ್ದು ಹಸುವಿನ ಮೇಲೆ ಬಿದ್ದಿದ್ದರಿಂದ 3 ಹಸುಗಳು ಮೃತಪಟ್ಟಿವೆ.
ಘಟನಾ ಸ್ಥಳಕ್ಕೆ ಶಾಸಕ ಎಚ್.ಕೆ.ಸುರೇಶ್, ತಹಶೀಲ್ದಾರ್ ಎಂ.ಮಮತ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಎಚ್.ಕೆ.ಸುರೇಶ್ ಮೃತಹಸುಗಳ ಮಾಲೀಕರಿಗೆ ಆರ್ಥಿಕ ಸಹಾಯ ನೀಡಿ, ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ರತ್ನಮ್ಮ ಮಾತನಾಡಿ, ನನ್ನ ಪತಿಗೆ ಹೃದಯದ ಚಿಕಿತ್ಸೆಯಾಗಿದೆ, ಅವರು ದುಡಿಯುವ ಸ್ಥಿತಿಯಲಿಲ್ಲ, ಇರುವ 18 ಗುಂಟೆ ಜಮೀನಿನಲ್ಲಿ ಹಸುಗಳನ್ನು ಸಾಕಿಕೊಂಡು, ಹಾಲು ಮಾರಿ ಜೀವನ ಸಾಗಿಸುತ್ತಿದೆ, ಈಗ ಮುಂದೆ ಹೇಗೆ ಜೀವನ ನಿರ್ವಹಣೆ ಮಾಡುವುದು ಎಂಬ ಭಯ ಕಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ಮೂರು ಹಸುಗಳು ಮೃತಪಟ್ಟಿರುವ ಕಾರಣ ಅಂದಾಜು ₹ 2 ಲಕ್ಷ ನಷ್ಟವಾಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.