ಹಾಸನ: ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ) ಮುಳುಗಡೆ ಸಂತಸ್ತರ ಭೂಮಿ ಹಂಚಿಕೆ ಹಗರಣದಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಬಲಾಢ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನೀಡಿದ್ದ ಆದೇಶಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರೇ ತಡೆ ನೀಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.
‘ಜಲಾಶಯ ಮುಳುಗಡೆ ಸಂತ್ರಸ್ತರ ಯೋಜನೆಯಡಿ 1654 ಎಕರೆ ಅಕ್ರಮ ಭೂ ಮಂಜೂರಾತಿ ನಡೆದಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಯಿತು. ಈಗ ಸಕಲೇಶಪುರ ತಹಶೀಲ್ದಾರ್ ರಕ್ಷಿತ್ ಅವರನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ಮೂರು ಬಾರಿ ಅಮಾನತ್ತುಗೊಂಡಿದ್ದ ಮಂಜುನಾಥ್ ಎಂಬುವರನ್ನು ನಿಯೋಜಿಸಲಾಗಿದೆ’ ಎಂದು ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಅ.3ರಂದು ಜಿಲ್ಲಾಧಿಕಾರಿಯೇ ಹಗರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಹೇಮಾವತಿ ಜಲಾಶಯ ಯೋಜನೆ ಭೂ ಸ್ವಾಧೀನಾಧಿಕಾರಿಗೆ ಪತ್ರ ಬರೆದಿದ್ದರು. ಪತ್ರ ಬರೆದು 17 ದಿನವಾದರೂ ಪ್ರಕರಣ ದಾಖಲಿಸಿಲ್ಲ. ಪ್ರಕರಣ ದಾಖಲಿಸದಂತೆ ಮೌಖಿಕವಾಗಿ ಡಿ.ಸಿ ಹೇಳಿದ್ದಾರೆ ಎಂದು ಗೊತ್ತಾಗಿದೆ. ಇದರ ಹಿಂದಿರುವ ಕಾಣದ ಕೈಗಳು ಯಾವುದು. ಯಾರ ಒತ್ತಡಕ್ಕೆ ಮಣಿದು ತಡೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಡಿ.ಸಿ ಅವರನ್ನು ಒತ್ತಾಯಿಸಿದರು.
ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ತರಿಗೆ 19 ಸಾವಿರ ಎಕರೆ ಭೂಮಿ ಮಂಜೂರಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿಯೇ ನಕಲಿ ದಾಖಲೆ ಸೃಷ್ಟಿಸಿ 1 ಸಾವಿರ ಎಕರೆ ಮಂಜೂರು ಮಾಡಲಾಗಿದೆ. ಇದು ದೊಡ್ಡ ಹಗರಣ ಆಗಿರುವುದರಿಂದ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಹಾಲಿ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.