ADVERTISEMENT

ಎಚ್ಆರ್‌ಪಿ: ಸರ್ಕಾರಿ ಭೂಮಿ ಕಬಳಿಕೆ ಪ್ರಕರಣದಲ್ಲಿ 2,370 ಮಂದಿಗೆ ನೋಟಿಸ್‌

414 ಕಡತ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್‌: ಡಿ.ಸಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 15:09 IST
Last Updated 23 ಜೂನ್ 2021, 15:09 IST
ಜಿಲ್ಲಾಧಿಕಾರಿ ಆರ್‌.ಗಿರೀಶ್
ಜಿಲ್ಲಾಧಿಕಾರಿ ಆರ್‌.ಗಿರೀಶ್   

ಹಾಸನ: ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ತನಿಖಾಧಿಕಾರಿಯ ವರದಿ ಅನ್ವಯ 2,370 ಜನರಿಗೆ ನೋಟಿಸ್ ನೀಡಿದ್ದು, 490 ಮಂದಿ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ತಿಳಿಸಿದರು.

ಕೆಲವರಿಗೆ ನೋಟಿಸ್ ತಲುಪಿಲ್ಲ. ನೋಟಿಸ್‌ಗೆ ಉತ್ತರಿಸಿರುವವರಿಗೆ ಮತ್ತೊಮ್ಮೆಏಳು ದಿನಗಳ ಕಾಲಾವಕಾಶ ನೀಡಿ, ಅಗತ್ಯ ದಾಖಲೆಗಳೊಂದಿಗೆ ಬಂದು ಉತ್ತರ ನೀಡಲು ಸೂಚಿಸಲಾಗಿದೆ. ವಿಶೇಷ ಭೂ ಸ್ವಾಧೀನಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿ ಆದೇಶ ಹೊರಡಿಸಲಿದ್ದಾರೆ. ಈ ಸಂಬಂಧ ಶೀಘ್ರ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂರು ವರ್ಷದ ಅವಧಿಯಲ್ಲಿ 569 ಪ್ರಕರಣಗಳಲ್ಲಿ ನೈಜ ಫಲಾನುಭವಿಗಳಿಗೆ ಭೂಮಿ ಮಂಜೂರಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಎರಡು ತಂಡಗಳನ್ನುನೇಮಿಸಲಾಗಿತ್ತು. ಈಗಾಗಲೇ ತಂಡವು ಪೊಲೀಸ್ ಸುಪರ್ದಿಯಲ್ಲಿದ್ದ ಮೂಲ ಕಡತಗಳನ್ನುಪರಿಶೀಲಿಸಿದ್ದು,ವಾರದಲ್ಲಿ ವರದಿ ಸಲ್ಲಿಸಲಿದೆ. ಅಲ್ಲದೇ 226 ಪ್ರಕರಣಗಳಲ್ಲಿ ಅರಣ್ಯ ಭೂಮಿ ಮಂಜೂರಾಗಿದೆ. ಆದರೆ ಇವುಗಳು ನಿಯಮದ ವಿರುದ್ಧವಾಗಿ ಮಂಜೂರಾಗಿಲ್ಲ. ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆಎಂದು ವಿವರಿಸಿದರು.

ಈ ಹಿಂದಿನ ನಾಲ್ಕು ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಲಿಖಿತಹೇಳಿಕೆ ಪಡೆಯುವಂತೆ ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್‌ ಸೂಚಿಸಿದ್ದಾರೆ. ತಹಶೀಲ್ದಾರ್‌ಗಳ ಬಗ್ಗೆಯೂ ಅವರಿಗೆಮಾಹಿತಿ ನೀಡಲಾಗಿದೆ. ಜುಲೈ ಮೊದಲ ವಾರ ಜಿಲ್ಲೆಗೆ ಭೇಟಿ ನೀಡುವ ರಾಜ್ಯದ ತಂಡ ಪ್ರಾಥಮಿಕವರದಿ ಮತ್ತು ದಾಖಲೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದೆ ಎಂದರು.

ADVERTISEMENT

ಸರ್ಕಾರಿ ಕಚೇರಿಯಿಂದ 414 ಕಡತಗಳ ನಾಪತ್ತೆ ಪ್ರಕರಣ ಸಂಬಂಧ ಎಫ್‌ಐಆರ್ದಾಖಲಾಗಿದ್ದು, ಪೊಲೀಸ್‌ ತನಿಖೆ ನಡೆಯುತ್ತಿದೆ. 50 ಪ್ರಕರಣಗಳಲ್ಲಿ ಸಹಿ ವ್ಯತ್ಯಾಸದ ಬಗ್ಗೆದೂರು ಬಂದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಲವು ಅಧಿಕಾರಿಗಳು ಸಹಿತಮ್ಮದಲ್ಲ ಎಂದು ಹೇಳಿದ್ದಾರೆ. ಒಬ್ಬ ಅಧಿಕಾರಿ ತಮ್ಮ ಅವಧಿಯಲ್ಲೇ ಆದೇಶ ಹೊರಡಿಸಿರುವುದನ್ನುಒಪ್ಪಿಕೊಂಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.