ಹಾಸನ: ‘ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಆ ರೀತಿ ಏನೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ತಿಳಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ಥಿರ ಸರ್ಕಾರ ಕೊಡಬೇಕಿರುವುದು ಎಲ್ಲ ಪಕ್ಷಗಳ ಜವಾಬ್ದಾರಿ. ಹಾಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಾರೆಂಬುದು ನನ್ನ ನಂಬಿಕೆ’ ಎಂದರು.
‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ’ ಎಂಬ ಕೆಲ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ಸರ್ಕಾರವಿದ್ದಾಗಲೂ ಇಂಥ ಮಾತುಗಳು ಬರುತ್ತವೆ. ಬಿಜೆಪಿ ಸರ್ಕಾರವಿದ್ದಾಗ ಎಷ್ಟು ಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರು? ಅವರ ಬೆಂಬಲಿಗರು ಕೂಡ ಮಾತನಾಡಿದ್ದರು’ ಎಂದು ಸಮರ್ಥಿಸಿಕೊಂಡರು.
‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿದ್ದರಾಮಯ್ಯ ಶಕ್ತಿ ತುಂಬುತ್ತಿದ್ದಾರೆ. ಇದೇ ರೀತಿ ಕೆಲಸ ಮುಂದುವರಿಸಬೇಕು ಎಂದರೇ, ನೀವು ಅಂತಹ ನಾಯಕರಿಗೆ ಶಕ್ತಿ ಕೊಡಬೇಕು’ ಎಂದು ಕೋರಿದರು.
‘ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ನನಗೂ ಸೂಚನೆ ಕೊಟ್ಟಿಲ್ಲ. ನಾನಂತೂ ಟಿಕೆಟ್ ಕೇಳಲ್ಲ, ಆಕಾಂಕ್ಷಿಯೂ ಅಲ್ಲ’ ಎಂದರು.
‘ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ. ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಜಾತಿಗಣತಿ ಮಾಡಿಸಿದ್ದರು. ಆದರೆ ಆ ವರದಿ ಸ್ವೀಕರಿಸುವ ಮುಂಚೆ ಅಧಿಕಾರ ಹೋಗಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.