ADVERTISEMENT

ಹಾಸನ: ಇಬ್ರಾಹಿಂ ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನ -ಎಚ್.ಕೆ. ಕುಮಾರಸ್ವಾಮಿ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 13:52 IST
Last Updated 4 ಫೆಬ್ರುವರಿ 2022, 13:52 IST
ಎಚ್‌.ಕೆ. ಕುಮಾರಸ್ವಾಮಿ
ಎಚ್‌.ಕೆ. ಕುಮಾರಸ್ವಾಮಿ   

ಹಾಸನ: ‘ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‌ಗೆ ಬರುವ ಕುರಿತು ಯಾವುದೇಅಧಿಕೃತ ಚರ್ಚೆನಡೆದಿಲ್ಲ. ಅವರು ಬಂದರೆ ಸೂಕ್ತ ಸ್ಥಾನ ನೀಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ಗೆ ಬರುವ ಸಂಬಂಧ ಅವರು ಯಾವುದೇ ಬೇಡಿಕೆ ಇಟ್ಟಿಲ್ಲ. ಯಾವುದೇ ಷರತ್ತನ್ನೂ ವಿಧಿಸಿಲ್ಲ. ಬಂದರೆ ಒಳ್ಳೆಯ ಸ್ಥಾನಮಾನ ಸಿಗಲಿದೆ.ನಮ್ಮ ನಾಯಕರುಇಬ್ರಾಹಿಂ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಚಾರದಲ್ಲಿ ಅವರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗಳು ಹತ್ತಿರ ಬಂದಾಗ ಪಕ್ಷಾಂತರ ಸಹಜ ಪ್ರಕ್ರಿಯೆ. ಇಲ್ಲಿಂದ ಅಲ್ಲಿಗೆ ಹೋಗುವುದು , ಅಲ್ಲಿಂದ ಇಲ್ಲಿಗೆ ಬರುವುದು ಸಾಮಾನ್ಯ. ಬೇರೆ ಕಡೆಗಳಿಂದಲೂ ಜೆಡಿಎಸ್‌ ಪಕ್ಷಕ್ಕೆ ಬರುವವರ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದರು.

ADVERTISEMENT

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಜೆಡಿಎಸ್ ಬಿಡುವುದು ಅಂತೆ, ಕಂತೆ. ಈಗಾಗಲೇ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ಪಕ್ಷವನ್ನು ಹಗುರವಾಗಿ ಕಾಣುವ ಸ್ಥಿತಿ ಕರ್ನಾಟಕದಲ್ಲಿಲ್ಲ. ಚುನಾವಣಾ ಪೂರ್ವ ಮೈತ್ರಿ ವಿಚಾರ ಕುರಿತು, ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ಆ ಬಗ್ಗೆ ಇನ್ನೂ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಲಾಗಿದೆ. ಹಿರಿಯರಾದ ಜಿ.ಮಾದೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಅವರಿಗೆ ತಪ್ಪಿನ ಅರಿವಾಗಿ ಪಕ್ಷಕ್ಕೆ ಬರುವುದಾದರೆ ನಂತರ ಪರಿಶೀಲಿಸಲಾಗುವುದು ಎಂದರು.

ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಎಲ್ಲಾ ರೀತಿಯ ಒತ್ತು ನೀಡಲಾಗಿದೆ. ಈಗಾಗಲೇ 130 ತಾಲ್ಲೂಕು ಘಟಕಗಳನ್ನು ಪುನರ್‌ ರಚಿಸಲಾಗಿದೆ. ಸಂಘಟನೆ ಮಾಡದವರನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್‌ನಲ್ಲಿ ರಾಜ್ಯದ 15 ಕಡೆಗಳಿಂದ ಜನತಾ ಜಲಧಾರೆ ಕಾರ್ಯಕ್ರಮ ಆರಂಭಿಸಲಾಗುವುದು. ಈ ಹಿಂದೆ ದಶ ದಿಕ್ಕುಗಳಿಂದ ಜನತಾದಳ ಎಂಬ ಕಾರ್ಯಕ್ರಮ ಮಾಡಲಾಗಿತ್ತು ಎಂದು ಹೇಳಿದರು.

ಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ರಂಘು ಹೊಂಗೆರೆ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ನಿವೃತ್ತ ಪ್ರಾಂಶುಪಾಲ ಡಿ.ಜಿ.ಕೃಷ್ಣೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.