ಹಾಸನ: ನಗರದ ಎಂ.ಜಿ ರಸ್ತೆಯಲ್ಲಿ ಅಕ್ರಮ ಕಟ್ಟಡವನ್ನು ಮಂಗಳವಾರ ತಡರಾತ್ರಿ ನಗರಸಭೆ ಸಿಬ್ಬಂದಿನೆಲಸಮ ಮಾಡಿದ್ದಾರೆ.
ಆದಿಚುಂಚನಗಿರಿ ಕಲ್ಯಾಣ ಮಂಟಪದ ಎದುರಿದ್ದ ಬೃಹತ್ ಮರವನ್ನು ಕಳೆದ ನವೆಂಬರ್ ನಲ್ಲಿ ಕಡಿದು, ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು.ದೊಡ್ಡ ಮರಗಳನ್ನು ಕಡಿದು ಹಾಕಿರುವುದಕ್ಕೆ ವೈದ್ಯರು, ಪರಿಸರವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿ, ಇದಕ್ಕೆ ಸಕಾರಣ ನೀಡಬೇಕು ಹಾಗೂ ಬದಲಿ ಗಿಡ ನೆಡಬೇಕು ಎಂದು ಮನವಿ ಮಾಡಿದ್ದರು.
ಮರ ಕಡಿದಿದ್ದು ಯಾರು? ಯಾವ ಕಾರಣಕ್ಕೆ? ಎಂದು ವೈದ್ಯರಾದ ಡಾ.ದೇವದಾಸು, ಡಾ.ಎಂ.ಕೆ.ನಾಗೇಶ್, ವಕೀಲ ಎ.ಹರೀಶ್ ಬಾಬು ಹಾಗೂ ಮೊದಲಾದವರು ಅರಣ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ, ಯಾರಿಂದಲೂ ನಿಖರ ಮಾಹಿತಿ ಬಂದಿರಲಿಲ್ಲ.
ಹಾಗಾಗಿ ವಿವಿಧ ಅಧಿಕಾರಿಗಳು ನೀಡಿದ್ದ ಲಿಖಿತ ಉತ್ತರ ಮತ್ತು ಕಟ್ಟಡ ನಿರ್ಮಾಣದ ಬಗ್ಗೆ ಸಚಿತ್ರ ಮಾಹಿತಿ ಒಳಗೊಂಡ ಸುಮಾರು 120 ಪುಟಗಳ ಅರ್ಜಿ ಸಿದ್ಧ ಮಾಡಿ ರಾಜ್ಯ ಕೈಕೋರ್ಟ್‌ನಲ್ಲಿಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡಿದ್ದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಆಯುಕ್ತರು, ಜಿಲ್ಲಾಧಿಕಾರಿ, ಹಾಸನ ವಲಯ ಅರಣ್ಯಾಧಿಕಾರಿ ಹಾಗೂ ಡಿಎಫ್‌ಒ ಹಾಸನ ಅವರನ್ನು ಪ್ರತಿವಾದಿಗಳನ್ನಾಗಿಮಾಡಲಾಗಿತ್ತು. ಐದು ವರ್ಷದ ಅವಧಿಯಲ್ಲಿ ಹಾಸನ ನಗರದ ವಿವಿಧೆಡೆ 2,700 ಕ್ಕೂ ಹೆಚ್ಚು ಮರಗಳ ಹನನ ಮಾಡಿರುವುದನ್ನೂ ಪಿಐಎಲ್‌ನಲ್ಲಿ ಪ್ರಸ್ತಾಪಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿದ್ದ ನ್ಯಾಯಪೀಠ, ‘ಎಲ್ಲವನ್ನೂ ಅವಲೋಕಿಸಿ ನಾಲ್ಕು ವಾರದೊಳಗೆ ಅಕ್ರಮ ಕಟ್ಟಡ ತೆರವುಗೊಳಿಸಬೇಕು ಎಂದು ಆದೇಶ ನೀಡಿ, ಈ ಕುರಿತು ಆ. 18ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿತ್ತು.
‘ಸಾರ್ವಜನಿಕರ ಸ್ಥಳ (ಫುಟ್‌ಪಾತ್) ಜನರ ಉಪಯೋಗಕ್ಕೆ ಮಾತ್ರವೇ ಬಳಕೆಯಾಗಬೇಕೇ ಹೊರತು, ಅಲ್ಲಿ ಏನನ್ನೂ ನಿರ್ಮಾಣ ಮಾಡಕೂಡದು ಎಂದು ಸುಪ್ರಿಂಕೋರ್ಟ್ ಆದೇಶವೇ ಇದೆ. ಹೀಗಾಗಿ ಫುಟ್‌ಪಾತ್‌ನಲ್ಲಿ ಯಾವುದೇ ನಿರ್ಮಾಣ ನಡೆಯುವುದು ಸೂಕ್ತವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಹೈಕೋರ್ಟ್ ಚಾಟಿ ಬೀಸುತ್ತಿದ್ದಂತೆಯೇ ದಿಢೀರ್ ಎಚ್ಚೆತ್ತ ನಗರಸಭೆ ಆಯುಕ್ತರು, ಮಂಗಳವಾರರಾತ್ರಿ ಪೊಲೀಸ್ ಭದ್ರತೆಯೊಂದಿಗೆ ಅಕ್ರಮ ಕಟ್ಟಡವನ್ನು ನೆಲಸಮ ಗೊಳಿಸಿದರು.
‘ಎಂ.ಜಿ. ರಸ್ತೆಯಲ್ಲಿ ದಿಢೀರ್ ತಲೆ ಎತ್ತಿದ್ದ ಕಟ್ಟಡ ಈಗ ಮಾಯವಾಗಿದೆ. ಮರ ಉಳಿಯಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ದೊಡ್ಡ ಮರ ಕಡಿದ ಜಾಗದಲ್ಲಿ ಸಸಿ ನೆಡುವುದಾಗಿ ಅರಣ್ಯ ಇಲಾಖೆ ಹೈಕೋರ್ಟ್‌ಗೆ ಲಿಖಿತವಾಗಿ ಹೇಳಿಕೆ ನೀಡಿದೆ. ಆ ಕೆಲಸ ಶೀಘ್ರವಾಗಿ ಆಗಬೇಕು. ಬೇರೆ ಕಡೆ ವೃಕ್ಷ ಹನನ ಮಾಡಿರುವ ಜಾಗದಲ್ಲೂ ಸಸಿ ನೆಡಬೇಕು. ಇದರಿಂದ ಪ್ರೇರಿತರಾಗಿ ಯುವಕರು, ಪರಿಸರವಾದಿಗಳು, ಜನತೆ ಹೋರಾಟ ಮಾಡಿದರೆ ಖಂಡಿತ ನ್ಯಾಯ ಸಿಗಲಿದೆ. ಜೊತೆಗೆ ಪರಿಸರವೂ ಉಳಿಯಲಿದೆ’ ಎಂದು ದೂರುದಾರ ಡಾ.ದೇವದಾಸು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.