ಕೊಣನೂರು: ಭತ್ತದ ಬೆಳೆಗೆ ಪ್ರಸಿದ್ದಿ ಹೊಂದಿರುವ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ನಾಲಾ ವ್ಯಾಪ್ತಿ, ಹಾರಂಗಿ ಜಲಾನಯನ ಮತ್ತು ಹೇಮಾವತಿಯ ಬದುವಿನ ನಾಲೆಯ ಅಚ್ಚುಕಟ್ಟಿನಲ್ಲಿ ಭತ್ತದ ನಾಟಿ ಕಾರ್ಯ ಚುರುಕಾಗಿದೆ. ಇದೀಗ ಸಾಂಪ್ರದಾಯಿಕ ಭತ್ತದ ಬದಲು, ಆರ್‌ಎನ್‌ಆರ್15048 ತಳಿಯ ಭತ್ತ ಬೆಳೆಯಲು ರೈತರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ.
ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಮೊದಲ ಬಾರಿಗೆ ಕಟ್ಟಿದ ಅಣೆಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ, ಈ ಭಾಗದ ರೈತರ ಜೀವನಾಡಿಯಾಗಿದೆ. ಭತ್ತದ ಬೆಳೆ ಬೆಳೆಯಲು ಅನುಕೂಲಕರ ವಾತಾವರಣವಿದೆ.
ಕಾವೇರಿ ನದಿಯ ಇಕ್ಕೆಲಗಳಲ್ಲಿ ಹಾದುಹೋಗಿರುವ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. ಅರಕಲಗೂಡು ತಾಲ್ಲೂಕು ಮಾತ್ರವಲ್ಲದೇ ಎಡದಂಡೆ ನಾಲೆಯು ಕೆ.ಆರ್.ನಗರ ತಾಲ್ಲೂಕಿನ ಪಶುಪತಿ ಹಾಗೂ ಬಲದಂಡೆ ನಾಲೆ ಚುಂಚನಕಟ್ಟೆಯ ಕೆಸ್ತೂರುಗೇಟ್‌ವರೆಗೆ ಹಾದುಹೋಗಿದೆ. ಇವೆರಡು ನಾಲೆಗಳಿಗೆ ನೀರು ಹರಿಸಲಾಗಿದ್ದು, ರೈತರು ಭತ್ತದ ಸಸಿ ಮಡಿ ಬೆಳೆಸಿ ನಾಟಿ ಕಾರ್ಯ ನಡೆಸಿದ್ದಾರೆ.
ಕೊಣನೂರು –ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಅಚುಕಟ್ಟು ಹೊಂದಿರುವ ಈ ಪ್ರದೇಶದಲ್ಲಿ, ಹೊಗೆಸೊಪ್ಪು ಬೆಳೆ ಕಾಲಿಡುವ ಮುನ್ನ ಬಹುತೇಕ ರೈತರು ಅಗಸ್ಟ್ ಮೊದಲ ವಾರಕ್ಕೆ ಭತ್ತದ ನಾಟಿ ಪೂರ್ಣಗೊಳಿಸುತ್ತಿದ್ದರು. ಅನೇಕ ರೈತರು ಗದ್ದೆಯಲ್ಲಿ ಹೊಗೆಸೊಪ್ಪು ಬೆಳೆಯುವುದರಿಂದ ಕಟಾವು ಕಾರ್ಯ ನಡೆಸುವುದು ತಡವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಟಿಯನ್ನು ಅಗಸ್ಟ್‌ನಿಂದ ಪ್ರಾರಂಭಿಸಿ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಮಾಡುತ್ತಾರೆ.
ಸೆಪ್ಟೆಂಬರ್‌ನಲ್ಲಿ ಭತ್ತದ ಪೈರು ನಾಟಿ ಮಾಡುವುದರಿಂದ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಚಳಿಗಾಲದ ಕೊರೆಗೆ ಸಿಲುಕುತ್ತಿದೆ. ಹಾಲುಗಟ್ಟುವ ಭತ್ತದ ಕಾಳು, ಕೊರೆ ನೀರಿಗೆ ಕರಗಿ ಜೊಳ್ಳಾಗಿ ಇಳುವರಿ ಕೂಡ ಕುಂಠಿತಗೊಳ್ಳುತ್ತಿದೆ. ಆದಾಯ ತರುವ ತಂಬಾಕು ಬೆಳೆಗೆ ಮಾರು ಹೋಗಿರುವುದರಿಂದ, ಭತ್ತದ ಬೆಳೆಯಲ್ಲಿ ಇಳುವರಿ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ.
ಈ ವರ್ಷ ಉತ್ತಮ ಮಂಗಾರು ಮಳೆ ಸುರಿದಿರುವುದರಿಂದ ನಾಲ್ಕೂ ನಾಲೆಗಳಲ್ಲೂ ನೀರು ಹರಿಯುತ್ತಿದ್ದು, ಭತ್ತ ಬೆಳೆಯುವ ರೈತರು, ಆತಂಕವಿಲ್ಲದೆ ಸ್ವಲ್ಪ ಹೆಚ್ಚಿನ ವಿಸ್ತೀರ್ಣದಲ್ಲಿ ಭತ್ತ ಬೆಳೆಯುವ ಹುಮ್ಮಸ್ಸಿನಲ್ಲಿದ್ದಾರೆ.
ಹಿಂದಿನಿಂದಲೂ ರಾಜಮುಡಿ, ರಾಜಭೋಗ ಭತ್ತದ ತಳಿಗಳಿಗೆ ಹೆಸರಾಗಿರುವ ಇಲ್ಲಿ, ವರ್ಷಗಳು ಕಳೆದಂತೆ ವ್ಯಾಪಾರದ ಉದ್ದೇಶದಿಂದ ಹೆಚ್ಚು ಇಳುವರಿ ದೊರಕುವ ತನು, ಬಿ.ಆರ್ 2655, ಐ.ಆರ್. 64 ಮತ್ತು ಸುಧಾರಿತ ತಳಿಗಳಾದ ಕೆಆರ್‌ಎಚ್ 4, ವಿಎನ್‌ಆರ್ 2233, ಪಿಎಸಿ 01 ತಳಿಯ ಭತ್ತಗಳನ್ನು ಬೆಳೆಯುವುದು ವಾಡಿಕೆಯಾಗಿದೆ.
ವರ್ಷಗಳು ಕಳೆದಂತೆ ಮಳೆಯ ಕೊರತೆಯಿಂದಾಗಿ ಭತ್ತವನ್ನು ಬೆಳೆಸಲು ಅಗತ್ಯವಿರುವಷ್ಟು ನೀರು ಸಿಗುತ್ತಿಲ್ಲ. ಹೀಗಾಗಿ ಬೆಳೆ ನಷ್ಟ ಹೊಂದುವ ಬದಲು, ರೈತರು 130 ದಿನಗಳಲ್ಲಿ ಬೆಳೆಯುವ, ತಿನ್ನಲು ಯೋಗ್ಯವಿರುವ ಮತ್ತು ಸುಮಾರು 3 ರಿಂದ 4 ಅಡಿಗಳಷ್ಟು ಉದ್ದ ಬೆಳೆಯುವ, ಸಣ್ಣ ಭತ್ತ ಆರ್‌ಎನ್ಆರ್ 15048 ಭತ್ತದ ತಳಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
100 ಕ್ವಿಂಟಲ್ ಬೀಜ ಮಾರಾಟ
ಕೊಣನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಈ ಮುಂಗಾರಿನಲ್ಲಿ 60 ಕ್ವಿಂಟಲ್ ಆರ್‌ಎನ್‌ಆರ್ 15048 ಭತ್ತದ ತಳಿಯ ಬಿತ್ತನೆ ಬೀಜ ಮಾರಾಟವಾಗಿದೆ. ರಾಮನಾಥಪುರ ರೈತ ಸಂಪರ್ಕ ಕೇಂದ್ರದಲ್ಲಿ 40 ಕ್ವಿಂಟಲ್ ಮಾರಾಟವಾಗಿದೆ. ಪ್ರತಿ ಎಕರೆ ಬಿತ್ತನೆಗೆ 15 ಕೆ.ಜಿ. ಬೀಜ ಅಗತ್ಯವಾಗಿದೆ. ಸಕ್ಕರೆ ಅಂಶ ಕಡಿಮೆಯಿರುವ ಈ ತಳಿಯ ಭತ್ತಕ್ಕೆ ಬೇಡಿಕೆ ಹೆಚ್ಚುತ್ತಿದ್ದು ಈ ವರ್ಷ ಬೆಳೆದ ಭತ್ತವನ್ನೇ ಮುಂದಿನ ವರ್ಷಕ್ಕೆ ಬಿತ್ತನೆಗೆ ಬಳಸಬಹುದು ಎಂಬುದು ಬಹುತೇಕ ರೈತರ ಅಭಿಪ್ರಾಯವಾಗಿದೆ.
ಆರ್‌ಎನ್‌ಆರ್ 15048 ತಳಿಯ ಭತ್ತವು ಸಣ್ಣದಿರುವುದರಿಂದ ಊಟಕ್ಕೆ ಹೆಚ್ಚು ಬಯಸುತ್ತಾರೆ. ಎಕರೆಗೆ 16 ರಿಂದ 18 ಕ್ವಿಂಟಲ್ ಇಳುವರಿ ಸಿಗುತ್ತದೆ.–ಸೋಮಶೇಖರ್ ಕೊಣನೂರು, ರೈತ ಸಂಪರ್ಕ ಕೇಂದ್ರದ ಕೃಷಿ ಆಧಿಕಾರಿ
ಈ ವರ್ಷ ಉತ್ತಮ ಮುಂಗಾರು ಮಳೆ ಬಿದ್ದಿದ್ದು ಭತ್ತ ಬೆಳೆಯಲು ನಾಲೆಗಳ ಕೊನೆಯವರೆಗೂ ನೀರು ಹರಿಸಿ ಅಚ್ಚುಕಟ್ಟಿನ ಎಲ್ಲ ರೈತರಿಗೂ ನೀರು ದೊರಕುವಂತೆ ಕ್ರಮ ವಹಿಸಲಾಗಿದೆ.–ಎಸ್.ಸಿ. ಚೌಡೇಗೌಡ., ಹಾರಂಗಿ ಮಹಾಮಂಡಳದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.