ADVERTISEMENT

ಬಜೆಟ್‌ನಲ್ಲಿ ಹಸನಾಗುವುದೇ ‘ಹಾಸನ’

ಮೂಲಸೌಕರ್ಯ ಅಭಿವೃದ್ಧಿ, ಗ್ರಾಮಗಳ ಪ್ರಗತಿಗೆ ಬೇಕಿದೆ ಉತ್ತೇಜನ: ಕೈಗಾರಿಕೆ ಸ್ಥಾಪನೆಗೂ ಬೇಕು ಒತ್ತು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 6:50 IST
Last Updated 12 ಫೆಬ್ರುವರಿ 2024, 6:50 IST
ಚನ್ನಕೇಶವ ಸ್ವಾಮಿ ದೇವಸ್ಥಾನ
ಚನ್ನಕೇಶವ ಸ್ವಾಮಿ ದೇವಸ್ಥಾನ   

ಹಾಸನ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್‌, ಹಾಸನ ಜಿಲ್ಲೆಯ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಲಿದೆ ಎನ್ನುವ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ.

ಜಿಲ್ಲೆಯು ವಿಶೇಷವಾಗಿ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯ ಭೌಗೋಳಿಕ ಲಕ್ಷಣ ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಮೇಲಾಟ ಮತ್ತು ಇತರೆ ಕಾರಣಕ್ಕೆ ಅಭಿವೃದ್ಧಿ ವಿಚಾರವಾಗಿ ಒಂದಲ್ಲ ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತ ಬಂದಿದೆ.

ರಾಜ್ಯದ ಬಜೆಟ್ ಇತಿಹಾಸದಲ್ಲಿ ಜೆಡಿಎಸ್ ಹೊರತಾದ ಪಕ್ಷಗಳು, ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡುಗೆಗಳನ್ನು ನೀಡಿಲ್ಲ. ಈ ಬಾರಿಯಾದರೂ ಆ ಅಪವಾದ ತಪ್ಪಲಿದೆಯೇ ಎನ್ನುವ ಕುತೂಹಲ ಎಲ್ಲರದ್ದಾಗಿದೆ.

ADVERTISEMENT

ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಅನುದಾನ ನೀಡುವುದು ಇಂದಿನ ಅಗತ್ಯವಾಗಿದೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ ಬೂವನಹಳ್ಳಿ ವಿಮಾನ ನಿಲ್ದಾಣ ಕಾಮಗಾರಿ ಚುರುಕಾಗಲು ಬೇಕಿರುವ ಅನುದಾನ ನೀಡಬೇಕು. ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಕಾಡಾನೆ ಹಾವಳಿ ಜೊತೆಗೆ ಇತರೆ ವನ್ಯಜೀವಿಗಳ ಉಪಟಳಕ್ಕೆ ಮುಕ್ತಿ ನೀಡಬೇಕಾಗಿದೆ. ಹಾಸನ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಬಜೆಟ್‌ನಲ್ಲಿ ಘೋಷಣೆ ಆಗಬೇಕಿದೆ. ಜೊತೆಗೆ ಹಾಸನ ನಗರಸಭೆಗೆ ಹೊಸದಾಗಿ ಸೇರಿರುವ 25 ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಬೇಕಿದೆ.

ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ಬಾಕಿ ಹಣ ಬಿಡುಗಡೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ಘೋಷಣೆ ಆಗಬೇಕಾಗಿದೆ.

ಇದಲ್ಲದೇ ಬೇಲೂರು– ಹಳೇಬೀಡು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ವಿಶೇಷ ಕೊಡುಗೆ ಅಗತ್ಯವಾಗಿದೆ. ಪ್ರಕೃತಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಸಕಲೇಶಪುರ ಹಾಗೂ ಪಶ್ಚಿಮ ಘಟ್ಟಕದ ಪ್ರವಾಸೋದ್ಯಮಕ್ಕೆ ಒತ್ತು ಸಿಗಬೇಕಾಗಿದೆ.

ಹಿರೀಸಾವೆ ಹೋಬಳಿ ಕೇಂದ್ರಕ್ಕೆ ರೈಲು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಂಪರ್ಕ ಉತ್ತಮವಾಗಿದೆ. ತೆಂಗು ಪ್ರಮುಖ ಬೆಳೆಯಾಗಿದ್ದು, ಇದರ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆ ಆರಂಭಿಸುವುದರಿಂದ ತೆಂಗಿನ ಬೆಳೆಗೆ ಬೆಲೆ ಬರಲಿದೆ. ಯುವ ಜನತೆಗೆ ಉದ್ಯೋಗ ದೊರೆಯುತ್ತದೆ. ದಿಡಗ–ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಹಿರೀಸಾವೆಯಲ್ಲಿ ಸರ್ಕಾರಿ ಐಟಿಐ ಕಾಲೇಜು ಪ್ರಾರಂಭವಾದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಒಳ್ಳೆಯದು ಎನ್ನುತ್ತಾರೆ ನಿವೃತ್ತ ಶಿಕ್ಷಕ ಕೃಷ್ಣೇಗೌಡ.

ವಿಶ್ವ ಪರಂಪರೆಯ ತಾಣವಾಗಿರುವ ಹಳೇಬೀಡಿನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯ ಬಜೆಟ್‌ನಲ್ಲಾದರೂ ಅವಕಾಶ ಸಿಗಲಿದೆಯೇ ಎನ್ನುವ ಆಶಾಭಾವನೆ ಜನರಲ್ಲಿ ಮೂಡಿದೆ.

ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಹೊಯ್ಸಳೇಶ್ವರ ದೇವಾಲಯ ಹಾಗೂ ಜೈನ ಬಸದಿ ಸುತ್ತ ಕೈಗೊಳ್ಳುವ ಸ್ವಚ್ಛತೆ, ಆನೆಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ಹಾಕಿದಂತಾಗುತ್ತಿದೆ. ಹೊಯ್ಸಳೇಶ್ವರ ದೇವಾಲಯದ ವಾಹನ ಪಾರ್ಕಿಂಗ್ ಸ್ಥಳ ಮಳೆಗಾಲದಲ್ಲಿ ಕೆಸರು ಗದ್ದೆಯಾದರೆ, ಬೇಸಿಗೆಯಲ್ಲಿ ದೂಳುಮಯವಾಗುತ್ತದೆ. ಪಾರ್ಕಿಂಗ್ ಸ್ಥಳದಲ್ಲಿ ಕಾಂಕ್ರೀಟ್ ಹಾಕಿದರೆ ನಿತ್ಯ ಸ್ವಚ್ಛ ಮಾಡುವ ಕೆಲಸಕ್ಕೆ ಅನುಕೂಲ ಆಗುತ್ತದೆ ಎಂಬ ಮಾತು ಪ್ರವಾಸಿಗರಿಂದ ಕೇಳಿ ಬರುತ್ತಿದೆ.

ಪ್ರವಾಸಿ ತಾಣದಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಪ್ರವಾಸಿಗರಿಗೆ ಉಳಿದುಕೊಳ್ಳಲು ಹೋಟೆಲ್‌ಗಳ ವ್ಯವಸ್ಥೆ, ವಿವಿಧ ವರ್ತಕರಿಗೆ ಸುಸಜ್ಜಿತವಾದ ವ್ಯಾಪಾರಿ ಮಳಿಗೆ ನಿರ್ಮಾಣ ಆಗಬೇಕಿದೆ. ಪುಷ್ಪಗಿರಿಬೆಟ್ಟ ಹಾಗೂ ಹುಲಿಕೆರೆಯ ಪುಷ್ಕರಣಿಯ ಕುರಿತು ಹೆಚ್ಚಿನ ಪ್ರಚಾರ ಆಗಬೇಕಾಗಿದೆ. ಹುಲಿಕೆರೆಯ ಪುಷ್ಕರಣಿಗೆ ತೆರಳಲು ವ್ಯವಸ್ಥಿತ ರಸ್ತೆ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಹಳೇಬೀಡು ಅಭಿವೃದ್ದಿಗೆ ಹಣ ಮೀಸಲಿಡಬೇಕಾಗಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಎ.ಮಂಜು
ರಶ್ಮಿ
ಎನ್.ವಿರೂಪಾಕ್ಷಯ್ಯ
ಯೋಗಣ್ಣ
ಎಂ.ಸಿ. ಸತೀಶ್ ಮರಿಶೆಟ್ಟಿಹಳ್ಳಿ
ಎಚ್‍.ಪಿ. ಸಂಪತ್ ಕುಮಾರ್
ಎಂ.ಆರ್. ರಂಗಸ್ವಾಮಿ
ಅತ್ತಿಹಳ್ಳಿ ಹಿರಿಯಣ್ಣಗೌಡ
ರಘು ಹೊಂಗೆರೆ
ಆಲೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಕಾಡಾನೆ ಓಡಾಟ.
ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ಯೋಜನೆಯ ನಾಲೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ
ಹಾಸನದ ತಾಯಿ ಮತ್ತು ಮಕ್ಕಳ ಆಸ್ಪತ್ರೆ.

ಬೆಟ್ಟದಷ್ಟು ನಿರೀಕ್ಷೆ ರಾಜ್ಯ ಮುಂಗಡ ಪತ್ರದ ಕುರಿತು ಅರಕಲಗೂಡು ತಾಲ್ಲೂಕಿನಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಪ್ರಮುಖವಾಗಿ ಉನ್ನತ ಶಿಕ್ಷಣಕ್ಕೆ ತಾಲ್ಲೂಕಿನಲ್ಲಿ ಯಾವುದೇ ಸೌಲಭ್ಯವಿಲ್ಲ. ಪಟ್ಟಣ ಹಾಗೂ ತಾಲ್ಲೂಕಿನ ಕೊಣನೂರಿನಲ್ಲಿ ಪದವಿ ಕಾಲೇಜುಗಳನ್ನು ಹೊರತುಪಡಿಸಿದರೆ ಬೇರೆ ವ್ಯವಸ್ಥೆ ಇಲ್ಲ. ಹೊರ ಊರುಗಳಿಗೆ ತೆರಳಬೇಕು. ಉನ್ನತ ಶಿಕ್ಷಣಕ್ಕೆ ಸೌಲಭ್ಯಗಳು ಬೇಕಿದೆ. ದೇವಾಲಯಗಳ ಪಟ್ಟಣ ರಾಮನಾಥಪುರ ಕಾವೇರಿ ನದಿಗೆ ಮೊದಲ ಅಣೆಕಟ್ಟೆ ನಿರ್ಮಿಸಿರುವ ಕಟ್ಟೇಪುರ ಕೊಣನೂರಿನ ತೂಗು ಸೇತುವೆ ಚಾರಣಕ್ಕೆ ಕಬ್ಬಳಿಗೆರೆ ಮಣಜೂರು ಬೆಟ್ಟಗಳಿವೆ. ಕೊಡಗಿನ ಪ್ರವಾಸಿ ತಾಣಗಳಿಗೆ ತಾಲ್ಲೂಕಿನ ಮೂಲಕವೇ ತೆರಳಬೇಕು. ಹೀಗಿದ್ದರೂ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಂಡಿಲ್ಲ. ಸ್ಥಳೀಯ ಉತ್ಪನ್ನಗಳನ್ನು ಬಳಸಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದ್ದರೂ ಕೈಗಾರಿಕೆಗಳು ಇಲ್ಲ. ಅರ್ಧಕ್ಕೆ ನಿಂತಿರುವ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಪರಿವರ್ತಿಸುವುದು ಕೊಣನೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವುದು ಸೇರಿದಂತೆ ಹತ್ತು ಹಲವು ನಿರೀಕ್ಷೆಗಳು ಜನತೆಯದ್ದಾಗಿದೆ.

ಜಾತಿವಾರು ಬಜೆಟ್‌ ಬೇಡ ಕೃಷಿ ಉತ್ಪನ್ನ ಸಂಸ್ಕರಣ ಘಟಕ (ಕೋಲ್ಡ್ ಸ್ಟೋರೆಜ್) ತಾಲ್ಲೂಕಿಗೆ ಒಂದರಂತೆ ತೆರೆಯಬೇಕು. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಹೆಚ್ಚಿನ ಅನುದಾನ ನೀಡಬೇಕು. ಜಾತಿವಾರು ಬಜೆಟ್ ಮಾಡದೇ ದುಡಿಯುವ ವರ್ಗದವರ ಪರವಾಗಿ ಇರಬೇಕು. ಎಚ್.ಎಸ್. ಮುರುಳಿಧರ್ ಹಿರೀಸಾವೆ ಮೂಲಸೌಕರ್ಯ ಒದಗಿಸಿ ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿರುವ ಉಪ ನೋಂದಣಿ ಕಚೇರಿಗೆ ಸ್ವಂತ ಕಟ್ಟಡ ಹೋಬಳಿ ಕೇಂದ್ರದಲ್ಲಿ ಸಾರ್ವಜನಿಕ ಶೌಚಾಲಯ ಮೂಲಸೌಲಭ್ಯಗಳ ಅಭಿವೃದ್ಧಿ ಆಗಬೇಕು. ಜಿಲ್ಲೆ ತಾಲ್ಲೂಕು ಹೋಬಳಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಿ. ಎಂ.ಸಿ. ಸತೀಶ್ ಮರಿಶೆಟ್ಟಿಹಳ್ಳಿ ವೀರಶೈವ ಮಹಾಸಭಾ ಯುವ ಘಟಕದ ತಾಲ್ಲೂಕು ಉಪಾಧ್ಯಕ್ಷ ಗ್ಯಾರಂಟಿಗೆ ಸೀಮಿತ ಬೇಡ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಬೇಕು. ಹಾಳಾದ ರಸ್ತೆಗಳ ದುರಸ್ತಿ ಹೋಬಳಿ ಕೇಂದ್ರದಲ್ಲಿ ಐಟಿಐ ಪದವಿ ಡಿಪ್ಲೊಮಾ ಕಾಲೇಜು ಮಂಜೂರು ಮಾಡಬೇಕು. ಗ್ಯಾರಂಟಿಗೆ ಸೀಮಿತವಾಗದೇ ಅಭಿವೃದ್ಧಿಗೂ ಅನುದಾನ ಒದಗಿಸಲಿ. ಎಚ್‍.ಪಿ. ಸಂಪತ್ ಕುಮಾರ್ ನುಗ್ಗೇಹಳ್ಳಿ ಕೃಷಿ ಪತ್ತಿನ ನಿರ್ದೇಶಕ ಪಂಚಾಯಿತಿಗೆ ಅನುದಾನ ಹೆಚ್ಚಿಸಿ ಉದ್ಯೋಗ ಖಾತ್ರಿ ಮತ್ತು ನರೇಗಾ ಯೋಜನೆ ದಿನಗೂಲಿ ₹500 ನೀಡಬೇಕು. ಪಂಚಾಯಿತಿ ಅಭಿವೃದ್ಧಿ ಹೆಚ್ಚಿನ ಅನುದಾನ ಒದಗಿಸಬೇಕು. ಅತ್ತಿಹಳ್ಳಿ ಹಿರಿಯಣ್ಣಗೌಡ ಜಂಬೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರವಾಸೋದ್ಯಕ್ಕೆ ಅನುದಾನ ನೀಡಿ ಹಳೇಬೀಡಿನ ಶಿಲ್ಪಕಲಾ ಸ್ಮಾರಕಗಳ ಸುತ್ತ ಅಭಿವೃದ್ದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಜೋಡಿಸಬೇಕು. ಬೇಲೂರು ಹಳೇಬೀಡು ಅಭಿವೃದ್ದಿಗಾಗಿಯೇ ಹಣ ಮಂಜೂರು ಮಾಡಬೇಕು. ಎನ್.ವಿರೂಪಾಕ್ಷಯ್ಯ ನಿವೃತ್ತ ಶಿಕ್ಷಕ ಹಳೇಬೀಡು ಏತ ನೀರಾವರಿಗೆ ಅನುದಾನ ಕೊಡಿ ರಂಗೇನಹಳ್ಳಿ ಗುಡ್ಡೇನಹಳ್ಳಿ ಗಂಗನಾಳು ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು. ಶಾಲಾ ಕೊಠಡಿ ನಿರ್ಮಾಣ ಆಗಬೇಕು. ಕೊಣನೂರು ಬಳಿ ಕಾವೇರಿ ನದಿಗೆ ದೊಡ್ಡ ಸೇತುವೆ ಆಗಬೇಕು. ಎ. ಮಂಜು ಅರಕಲಗೂಡು ಶಾಸಕ ಕೃಷಿ ನೀರಾವರಿಗೆ ಒತ್ತು ಸಿಗಲಿ ತಾಲ್ಲೂಕಿನಲ್ಲಿ ಕೃಷಿ ನೀರಾವರಿಗೆ ಒತ್ತು ನೀಡಬೇಕು. ಹಾರಂಗಿ ಹೇಮಾವತಿ ಉಪ ನಾಲೆಗಳ ಹೂಳು ತೆರವು ಮಾಡಬೇಕು. ಕೃಷಿ ಉಗ್ರಾಣ ಸ್ಥಾಪಿಸಬೇಕು. ತಾಲ್ಲೂಕು ಕೇಂದ್ರಗಳಲ್ಲಿ ಮಣ್ಣು ಪರೀಕ್ಷಾ ಕೇಂದ್ರ ತೆರೆಯಬೇಕು. ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಪ.ಪಂ.ಗೆ ಸ್ವಂತ ಕಟ್ಟಡ ಬೇಕು ಅರಕಲಗೂಡು ಪ.ಪಂ ಕಚೇರಿಗೆ ಸ್ವಂತ ಕಟ್ಟಡ ಆಗಬೇಕು. ಫುಡ್ ಕೋರ್ಟ್ ಸ್ಥಾಪಿಸಬೇಕು. ಹಳೆ ಬಸ್ ನಿಲ್ದಾಣ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಶೌಚಗೃಹ ವ್ಯವಸ್ಥೆ ಆಗಬೇಕು. ಎಚ್.ಎಸ್. ರಶ್ಮಿ ಪಟ್ಟಣ ಪಂಚಾಯಿತಿ ಸದಸ್ಯೆ ಗ್ರಾ.ಪಂ.ಗಳಿಗೆ ಅನುದಾನ ನೀಡಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಈ ಬಾರಿ ಮಂಡಿಸುವ ಬಜೆಟ್‌ನಲ್ಲಿ 15 ಹಣಕಾಸು ಯೋಜನೆ ನರೇಗಾ ಕಾಮಗಾರಿಗಳಿಗೆ ಅಧಿಕ ಅನುದಾನ ನೀಡಬೇಕು. ಎಲ್ಲ 28 ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು. ಎಂ.ಆರ್. ರಂಗಸ್ವಾಮಿ ಮಲ್ಲಿಪಟ್ಟಣ ಗ್ರಾಪಂ ಸದಸ್ಯ ಆಸ್ಪತ್ರೆಗಳಿಗೆ ಅನುದಾನ ನೀಡಿ ಹಾಸನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು ಹೊಸದಾಗಿ ಸೇರಿದ 25 ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ನಗರದಲ್ಲಿ ಹೈಟೆಕ್ ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಬೇಕು. ರಘು ಹೊಂಗೆರೆ ಜೆಡಿಎಸ್ ಜಿಲ್ಲಾ ವಕ್ತಾರ ರೈತರ ಅಭಿವೃದ್ಧಿಗೆ ಒತ್ತು ನೀಡಿ ಏತ ನೀರಾವರಿ ಯೋಜನೆಗಳಿಗೆ ಅನುದಾನ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಬ್ಬರಿಗೆ ಬೆಂಬಲ ಬೆಲೆ ಗೊಬ್ಬರಕ್ಕೆ ಸಬ್ಸಿಡಿ ಘೋಷಣೆ ಮಾಡಬೇಕು. ಬ್ಯಾಂಕ್‌ಗಳಿಂದ ಸಾಲ ಮರುಪಾವತಿಗೆ ನೋಟಿಸ್ ನೀಡಲಾಗುತ್ತಿದ್ದು ಈ ಬಗ್ಗೆ ಗಮನ ನೀಡಬೇಕು. ಬಾಬು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ

ಬಜೆಟ್ ನಿರೀಕ್ಷೆಗಳು * ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅನುದಾನ * ಮಲೆನಾಡು ಭಾಗದ ಕಾಡಾನೆ ಸಮಸ್ಯೆಗೆ ಪರಿಹಾರ * ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ * ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಹಣ * ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅಭಿವೃದ್ಧಿಗೆ ಒತ್ತು * ಕೆಆರ್‌ಎಸ್ ಮಾದರಿಯಲ್ಲಿ ಹೇಮಾವತಿ ಉದ್ಯಾನ * ಹಾಸನ-ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಚುರುಕು * ಆಲೂಗಡ್ಡೆ ಬೆಳೆ ಪುನಶ್ಚೇತನಕ್ಕೆ ಹೊಸ ಕಾರ್ಯಕ್ರಮ * ಅರಸೀಕೆರೆ ಎಂಜಿನಿಯರಿಂಗ್ ಕಾಲೇಜು ತ್ವರಿತ ಕಾಮಗಾರಿ * ಬೆಂಬಲ ಬೆಲೆಯೊಂದಿಗೆ ವರ್ಷ ಪೂರ್ತಿ ಕೊಬ್ಬರಿ ಖರೀದಿ * ಕಾಫಿ ಬೆಳೆಗಾರರಿಗೆ ಅಗತ್ಯ ಸೌಲಭ್ಯ * ತಾಯಿ ಮಕ್ಕಳ ಆಸ್ಪತ್ರೆಗೆ ಬಾಕಿ ಕಾಮಗಾರಿಗೆ ಅನುದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.