ADVERTISEMENT

ಆಲೂರು | ಜೋಳಕ್ಕೆ ಕಾಂಡ ಕೊರಕದ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 6:09 IST
Last Updated 31 ಜುಲೈ 2023, 6:09 IST
ಸುಳಿಯನ್ನು ಕೊರೆಯುತ್ತಿರುವ ಲದ್ದಿ ಹುಳು
ಸುಳಿಯನ್ನು ಕೊರೆಯುತ್ತಿರುವ ಲದ್ದಿ ಹುಳು   

ಎಂ. ಪಿ. ಹರೀಶ್

ಆಲೂರು: ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಮುಸುಕಿನ ಜೋಳಕ್ಕೆ ಕಾಂಡ ಕೊರೆಯುವ ಹುಳು ದಾಳಿ ಮಾಡುತ್ತಿದ್ದು, ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ.

ಜೋಳಕ್ಕೆ ಕಾಂಡ ಕೊರೆಯುವ ಹುಳು ದಾಳಿ ಮಾಡುವುದು ಇದೇ ಮೊದಲಲ್ಲ. ಜೋಳವನ್ನು ಯಾವುದೇ ಸಮಯದಲ್ಲಿ ಬಿತ್ತನೆ ಮಾಡಿದರೂ, ಹುಟ್ಟಿದ 25-30 ದಿನಗಳೊಳಗೆ ಕಾಂಡ ಕೊರೆಯುವ ಹುಳು ದಾಳಿ ಇಟ್ಟು, ಕಾಂಡ ಕೊರೆಯಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಕ್ರಿಮಿನಾಶಕ ಸಿಂಪಡಿಸಿದರೆ ರೋಗ ಉಲ್ಬಣವಾಗುವುದನ್ನು ಮಾತ್ರ ತಡೆಯಬಹುದು.

ADVERTISEMENT

ಆದರೆ ಈಗ ಜೋಳದ ಕಾಂಡದ ಮೇಲೆ ದಾಳಿ ಮಾಡುತ್ತಿರುವ ಹುಳುಗಳು, ಸೋನೆ ಮಳೆ, ಶೀತ ವಾತಾವರಣದಲ್ಲಿ ಸೃಷ್ಟಿಯಾಗಿರುವುದರಿಂದ ದಿನದಿಂದ ದಿನಕ್ಕೆ ಭಾರಿ ಗಾತ್ರವಾಗಿ ಬೆಳೆದು ಗಿಡಗಳನ್ನು ತಿನ್ನಲಾರಂಭಿಸಿವೆ.

ಸೋನೆ ಮಳೆಯಲ್ಲಿ ಹುಳುಗಳು ಬೆಳೆಯಲು ಅನುಕೂಲವಾಗುತ್ತದೆ. ಎಮಾಮೆಕ್ಟಿನ್ 100 ಗ್ರಾಂ. ಬೆನ್ಜೋಯೆಟ್ ಕ್ರಿಮಿನಾಶಕವನ್ನು 230 ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಿದರೆ ರೋಗವನ್ನು ತಡೆಯಬಹುದು.
ಎಂ. ಡಿ. ಮನು, ಸಹಾಯಕ ಕೃಷಿ ನಿರ್ದೇಶಕ

ಸೋನೆ ಮಳೆ ಪ್ರಾರಂಭವಾಗುವ ಮೊದಲು ಶೇ 60ಕ್ಕೂ ಹೆಚ್ಚು ರೈತರು ಬಿತ್ತನೆ ಮಾಡಿದ್ದರು. ಆಗ ಬಿತ್ತನೆ ಮಾಡಿದ್ದ ಬೆಳೆ ಬಹುತೇಕ ಹೂ ಬಿಡಲು ಪ್ರಾರಂಭವಾಗಿದೆ. ಆದರೆ ಇತ್ತೀಚೆಗೆ ಬಿತ್ತನೆ ಮಾಡಿದ್ದ ಬೆಳೆ, ಹುಳುಗಳ ದಾಳಿಗೆ ತುತ್ತಾಗಿದ್ದು ದಿನದಿಂದ ದಿನಕ್ಕೆ ರೋಗ ಉಲ್ಬಣವಾಗುತ್ತಿದೆ.

ಹುಳುಗಳು ಪ್ರಾರಂಭದಲ್ಲಿ ಜೋಳದ ಸೋಗೆಯನ್ನು ತಿಂದು, ಕಾಂಡದೊಳಗೆ ಅವಿತು ಕೊರೆಯುವುದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿ ಜೋಳದ ಮಾತೆ ಬಿಡುವುದಿಲ್ಲ. ಜೋಳ ಬಿತ್ತನೆ ಬೀಜವನ್ನು ಪರಿಷ್ಕರಣೆ ಮಾಡಿದ್ದರೂ, ಅದರಲ್ಲಿ ಎಲ್ಲ ರೋಗಗಳು ಅಡಗಿರುತ್ತವೆ. ಮಣ್ಣಿನ ಫಲವತ್ತತೆ ಇಲ್ಲದಿರುವುದು ಸಹ ಬೆಳೆಗೆ ರೋಗ ಬರಲು ಕಾರಣ ಇರಬಹುದು ಎನ್ನುವುದು ಅನುಭವಿ ರೈತರ ಅಳಲು.

ಮುಸುಕಿನ ಜೋಳ ಬೆಳೆಗೆ ದಶಕಗಳ ಹಿಂದೆ ಯಾವುದೇ ರೋಗ ಬರುತ್ತಿರಲಿಲ್ಲ. ಇತ್ತೀಚೆಗೆ ಯಾವುದೇ ಬೆಳೆ ರೋಗಸಹಿತ ಹುಟ್ಟಿ ಬೆಳೆಯುತ್ತದೆ. ರೋಗರಹಿತ ಬಿತ್ತನೆ ಬೀಜ ಎಲ್ಲೂ ದೊರಕುವುದಿಲ್ಲ. ವಿಧಿ ಇಲ್ಲದೇ ಬೆಳೆಗೆ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸುತ್ತಿರುವುದರಿಂದ ಇಡೀ ಭೂಮಿ ರೋಗಮಯವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಂಚೇನಹಳ್ಳಿ ಕೃಷಿಕ ಎಂ.ಡಿ. ಮಂಜುನಾಥ್ ತಿಳಿಸಿದ್ದಾರೆ.

ಲದ್ದಿ ಹುಳು ನಿಯಂತ್ರಣ ಕ್ರಮ

‘ಪೈರು ಬೆಳೆಯುವ ಹಂತದಲ್ಲಿ ಕಾಂಡ ಕೊರಕ ಮತ್ತು ಸೈನಿಕ ಹುಳದ ಬಾಧೆ ಕಂಡು ಬಂದಿದೆ. ಇದು ಮುಸುಕಿನ ಜೋಳದ ಸುಳಿಯಲ್ಲಿ ಇರುವುದರಿಂದ ಸುಳಿಯನ್ನು ಕೊರೆಯುತ್ತದೆ. ಇದರಿಂದ ಎಲೆಗಳು ಹೊರಬಂದಾಗ ಗರಿಯಲ್ಲಿ ಸರಣಿಯಾಗಿ ರಂಧ್ರಗಳು ಕಂಡುಬರುತ್ತವೆ. ಹುಳು ಬೆಳೆದಂತೆಲ್ಲ ಸುರುಳಿಯಲ್ಲಿ ಎಲೆಯನ್ನು ತಿಂದು ತ್ಯಾಜ್ಯವನ್ನು ಬಿಡುವುದರಿಂದ ಸುಳಿ ಕೈಯಿಂದ ಎಳೆದಾಗ ಸುಲಭವಾಗಿ ಹೊರಬರುತ್ತದೆ’ ಎಂದು ಕೀಟಶಾಸ್ತ್ರಜ್ಞ ಡಾ. ಬಸವರಾಜ್ ತಿಳಿಸಿದ್ದಾರೆ.

ಇದಕ್ಕೆ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿದಲ್ಲಿ ಕೀಟವನ್ನು ಸಂಪೂರ್ಣವಾಗಿ ಹತೋಟಿ ಮಾಡಬಹುದು. ಕೀಟವನ್ನು ನಿರ್ವಹಣೆ ಮಾಡಲು (ಶೇ 10-20 ಹಾನಿಯಾಗಿದ್ದಲ್ಲಿ) ಎಮೊಮೆಕ್ಟಿನ್ ಬೆಂಜೊಯೇಟ್  0.4 ಗ್ರಾಂ ಅಥವಾ ಸ್ಪೈನೋಟೋರಂ 1ಮಿ.ಲೀ. ಅಥವಾ ಕ್ಲೋರೋಂಟ್ರಾನಿಲಿಪ್ರೋಲ್ 0.4 ಮಿ.ಲೀ. ಅಥವಾ ಥಯೋಡಿಕಾರ್ಬ್ 75 ಡಬ್ಲುಪಿಐ ಗ್ರಾಂ ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಜೌಷಧಿಯ ಮಿಶ್ರಣ ಬೆಳೆಯ ಸುಳಿಗೆ ಬೀಳುವಂತೆ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರತಿ ಸಿಂಪರಣೆಯನ್ನು ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಕೈಗೊಳ್ಳಬೇಕು. ಪ್ರತಿ ಸಲವೂ ಒಂದೇ ತೆರನಾದ ಕೀಟನಾಶಕಗಳನ್ನು ಸಿಂಪರಣೆ ಮಾಡಬಾರದು ಎಂದು ತಿಳಿಸಿದ್ದಾರೆ.

ಮುಸುಕಿನ ಜೋಳ ಸೋಗೆ ತಿಂದಿರುವುದನ್ನು ಗಮನಿಸುತ್ತಿರುವ ರೈತ ಎಚ್. ಪಿ. ಕಾಂತರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.