ADVERTISEMENT

ಹಾಸನ | ಕರಗದ ಕಸದ ರಾಶಿ: ಸಮಸ್ಯೆಗೆ ಸಿಗದ ಮುಕ್ತಿ

ಕಸ ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಂದ ವ್ಯವಸ್ಥೆ: ರಸ್ತೆ ಬದಿಗೆ ಕಟ್ಟಡ, ಕೋಳಿ ತ್ಯಾಜ್ಯ

ಚಿದಂಬರಪ್ರಸಾದ್
Published 18 ನವೆಂಬರ್ 2024, 7:06 IST
Last Updated 18 ನವೆಂಬರ್ 2024, 7:06 IST
ಆಲೂರಿನ ತ್ಯಾಜ್ಯ ಸಂಸ್ಕರಣಾ ಘಟಕ.
ಆಲೂರಿನ ತ್ಯಾಜ್ಯ ಸಂಸ್ಕರಣಾ ಘಟಕ.   

ಹಾಸನ: ನಗರವೂ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದರೂ ರಸ್ತೆ ಬದಿ ಕಸದ ರಾಶಿ ಬೆಳೆಯುತ್ತಲೇ ಇದೆ. ಮನೆಯ ಬಳಿಗೆ ಬರುವ ಆಟೋ, ಟಿಪ್ಪರ್‌ಗಳಿಗೆ ಕಸ ಹಾಕುವುದಕ್ಕಿಂತ ರಸ್ತೆ ಬದಿ ಸುರಿಯುವುದಕ್ಕೆ ಹೆಚ್ಚಿನ ಜನರು ಆಸಕ್ತಿ ತೋರುತ್ತಿರುವಂತೆ ಕಾಣುತ್ತಿದೆ.

ಹಾಸನ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಿಗೆ 40 ಆಟೋ ಟಿಪ್ಪರ್‌ಗಳನ್ನು ಮನೆ ಮನೆ ಕಸ ಸಂಗ್ರಹಕ್ಕೆ ನಿಯೋಜನೆ ಮಾಡಲಾಗಿದೆ. ಹೊಸದಾಗಿ 25 ಹಳ್ಳಿಗಳು ಸೇರ್ಪಡೆಗೊಂಡಿದ್ದು, ಹೆಚ್ಚುವರಿಯಾಗಿ 15 ಆಟೋ ಟಿಪ್ಪರ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ತಿಳಿಸಿದರು.

ಹಾಸನ ನಗರ ಬೆಳೆಯುತ್ತಿದ್ದು, ಇದಕ್ಕೆ ಅನುಗುಣವಾಗಿ ಕಸದ ಸಮಸ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಕಸ ವಿಲೇವಾರಿ ಹಾಗೂ ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಅವರು.

ADVERTISEMENT

ಅಗತ್ಯ ಸಲಕರಣೆ ಸೇರಿದಂತೆ 10 ಟ್ರ್ಯಾಕ್ಟರ್ ಬಳಕೆ ಮಾಡಲಾಗುತ್ತಿದ್ದು, ಮನೆ ಮನೆ ಕಸ ಅಲ್ಲದೇ ಕೆಲ ಪ್ರದೇಶದಲ್ಲಿ ಸಾರ್ವಜನಿಕರು ಹಾಕಿರುವ ಕಸವನ್ನು ವಿಲೇವಾರಿ ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ನಾಲ್ಕು ಜೆಸಿಬಿ ಸೇರಿದಂತೆ ಅಗತ್ಯ ಸಲಕರಣೆ, ವಾಹನಗಳ ಬಳಕೆ ಮಾಡಲಾಗುತ್ತಿದ್ದು, ನಗರವನ್ನು ಸ್ವಚ್ಛವಾಗಿ ಇಡಲು ಸೂಕ್ತ ಕ್ರಮವನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ನರಸಿಂಹಮೂರ್ತಿ ಹೇಳಿದರು.

ಕಸವನ್ನು ಈ ಹಿಂದೆ ಸಂತೆಪೇಟೆ ಸಮೀಪದ ಎಪಿಎಂಸಿ ಮಾರುಕಟ್ಟೆ ಎದುರು ಹಾಕಲಾಗುತ್ತಿತ್ತು. ಇದೀಗ ಅಗಿಲೆ ಸಮಿಪ ಕಾಂಪೋಸ್ಟ್ ತಯಾರಿಕೆ ಹಾಗೂ ಡಂಪಿಂಗ್‌ ಯಾರ್ಡ್ ನಿರ್ಮಾಣ ಮಾಡಲಾಗಿದ್ದು, ನಿತ್ಯ ನಗರದಲ್ಲಿ ಸಂಗ್ರಹವಾಗುವ 25 ಟನ್ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಶೇ 60 ಹಸಿ ಕಸ, ಶೇ 40 ಒಣ ಕಸ ಸಂಗ್ರಹವಾಗುತ್ತಿದ್ದು, ಹಸಿಕಸದಿಂದ ಕಾಂಪೋಸ್ಟ್‌ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

360 ಮಂದಿ ಪೌರಕಾರ್ಮಿಕರ ಅಗತ್ಯವಿದ್ದು, ಸದ್ಯ 110 ಮಂದಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 250 ಹೆಚ್ಚುವರಿ ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರುತ್ತಿರುವ ಕಾರಣ ಪೌರಕಾರ್ಮಿಕರ ಅಗತ್ಯತೆ ಹೆಚ್ಚಿದ್ದು, ಹೆಚ್ಚುವರಿ ನೇಮಕಕ್ಕೆ ಅನುಮೋದನೆ ದೊರೆಯಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಇಕ್ಕೆಲ ಸೇರಿದಂತೆ ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ಕೋಳಿ ತ್ಯಾಜ್ಯ, ಮನೆ ನಿರ್ಮಾಣ ತ್ಯಾಜ್ಯವನ್ನು ಸಾರ್ವಜನಿಕರು ಎಲ್ಲಿಬೇಕೆಂದಲ್ಲಿ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು, ರಾತ್ರಿ ವೇಳೆ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿದೆ.

ಕೋಳಿ ಕಸ ಹಾಗೂ ಮಾಂಸ ಮಾರಾಟ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಈ ಕಸ ಸಂಗ್ರಹಕ್ಕೆ ವಿಶೇಷ ತಂಡ ರಚನೆ ಮಾಡಿ, ವಾಹನ ವ್ಯವಸ್ಥೆ ಮಾಡಲಾಗಿದ್ದು, ನಗರವನ್ನು ಸ್ವಚ್ಛವಾಗಿ ಇಡಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಬೇಕಾಬಿಟ್ಟಿ ಕಸ ಎಸೆಯುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡುವ ನಿಟ್ಟಿನಲ್ಲಿಯೂ ಗಮನಹರಿಸಲಾಗುತ್ತಿದೆ ಎಂದರು.

ಹಿರೀಸಾವೆ ಹೋಬಳಿಯ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳು, ಕೆರೆ, ಕಟ್ಟೆಗಳ ಪಕ್ಕದಲ್ಲಿ ಕಸದ ರಾಶಿಗಳಿವೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕಸ ತ್ಯಾಜ್ಯ ನಿರ್ವಹಣಾ ಘಟಕಗಳಿದ್ದರೂ, ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕಸದ ವಿಂಗಡಣೆಯೂ ಆಗುತ್ತಿಲ್ಲ.

ಹಿರೀಸಾವೆ ಹೋಬಳಿ ಕೇಂದ್ರದ ಪಂಚಾಯಿತಿಯಲ್ಲಿ ಎರಡು ಕಸ ವಿಲೇವಾರಿ ವಾಹನಗಳಿವೆ. ನಿತ್ಯ ಕಸ ಸಂಗ್ರಹಿಸುತ್ತಿವೆ. ಆದರೆ ಕಸ ಹಾಕಲು ಸರ್ಕಾರದಿಂದ ಜಾಗ ನೀಡಿಲ್ಲ. ಸಂಗ್ರಹವಾದ ಕಸವನ್ನು ದಿಡಗ ರಸ್ತೆಯ ಪಕ್ಕದಲ್ಲಿ ಖಾಸಗಿ ಜಮೀನಿನಲ್ಲಿ ಹಾಕಲಾಗುತ್ತಿದೆ. ಇದರಿಂದ ರಸ್ತೆಯಲ್ಲಿ ತಿರುಗಾಡುವವರಿಗೆ ಮತ್ತು ಅಕ್ಕಪಕ್ಕದ ತೋಟದವರಿಗೆ ತೊಂದರೆ ಆಗುತ್ತಿದೆ.

ಪ್ರವಾಸಿ ತಾಣವಾದ ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 8ರ ರೈಲ್ವೆ ಮೇಲ್ಸೇತುವೆ ಬಳಿ ಜನರು ಕಸ ಹಾಕುವುದರಿಂದ ಪ್ರವಾಸಿಗರಿಗೆ ಕಸದ ರಾಶಿ ಸ್ವಾಗತ ಕೋರುತ್ತಿದೆ. ಕಳೆದ ವರ್ಷ ಈ ಜಾಗದಲ್ಲಿ ಹಾಕಿದ್ದ ಕಸದ ರಾಶಿಯನ್ನು ಲೋಕೋಪಯೋಗಿ ಇಲಾಖೆಯವರು ಸ್ವಚ್ಛ ಮಾಡಿಸಿ, ಕಸ ಹಾಕದಂತೆ ಎಚ್ಚರಿಕೆ ಫಲಕ ಅಳವಡಿಸಿದ್ದರೂ, ಕಸ ಹಾಕುವವರು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಜನರು.

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳನ್ನು ಹೊಂದಿದೆ. ಮರಸು, ಹಳೆ ಆಲೂರು ಮತ್ತು ಬೇಡಚವಳ್ಳಿ ಗ್ರಾಮಗಳು ಕೃಷಿ ವಲಯಕ್ಕೆ ಅಂಟಿಕೊಂಡಿವೆ. ಆದರೆ ಪಟ್ಟಣದ ಕೇಂದ್ರ, ಹೌಸಿಂಗ್ ಬೋರ್ಡ್, ಆಶಾ ಬಡಾವಣೆ ಮತ್ತು ಅಂಬೇಡ್ಕರ್ ನಗರಗಳಲ್ಲಿ ಅತಿ ಹೆಚ್ಚು ಕಸ ಸಂಗ್ರಹವಾಗುತ್ತದೆ.

ಪಟ್ಟಣ ಪಂಚಾಯಿತಿ ಈಗಾಗಲೇ ಪ್ರತಿ ಮನೆಗಳ ಬಳಿಗೆ ತೆರಳಿ ಆಟೋ ಮೂಲಕ ಕಸ ಸಂಗ್ರಹ ಮಾಡುತ್ತಿದೆ. ವಾರದ ಸಂತೆ ಮರುದಿನ ಮತ್ತು ಆಗಾಗ ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಟ್ರ್ಯಾಕ್ಟರ್ ಮತ್ತು ಆಟೋ ಮೂಲಕ ಸಂಗ್ರಹಿಸಿ ಬಾಚನಹಳ್ಳಿ ಬಳಿ ಇರುವ ಕಸ ಸಂಗ್ರಹಣ ಕೇಂದ್ರಕ್ಕೆ ವಿಲೆವಾರಿ ಮಾಡುತ್ತಾರೆ.

ಪೂರಕ ಮಾಹಿತಿ: ಸಿ.ಬಿ. ಸಂತೋಷ್‌, ಎಂ.ಪಿ. ಹರೀಶ್‌, ಹಿ.ಕೃ. ಚಂದ್ರು, ಎಚ್‌.ಎಸ್. ಅನಿಲ್‌ಕುಮಾರ್‌

ಆಲೂರಿನಲ್ಲಿ ಕಸವನ್ನು ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಕೇಂದ್ರದಲ್ಲಿ ಹಾಕಲಾಗುತ್ತಿದೆ.
ಪ್ರವಾಸಿ ತಾಣದಲ್ಲೂ ಅವ್ಯವಸ್ಥೆ
ಪ್ರವಾಸಿ ತಾಣವಾಗಿರುವ ಹಳೇಬೀಡಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಬೇಲೂರು– ಬಾಣಾವರ ರಸ್ತೆ ಬದಿಯಲ್ಲಿ ಜನರು ಎಲ್ಲೆಂದರಲ್ಲಿ ಕಸ ಸುರಿಯುವುದು ಹೆಚ್ಚಾಗುತ್ತಿದೆ. ಪ್ರವಾಸಿಗರು ಹಳೇಬೀಡು ಪ್ರವೇಶಿಸಿದ ತಕ್ಷಣ ತ್ಯಾಜ್ಯ ರಾಶಿ ದರ್ಶನ ಮಾಡುವಂತಾಗಿದೆ. ನಿತ್ಯ ಪಂಚಾಯಿತಿಯ ಕಸ ಸಂಗ್ರಹಿಸುವ ವಾಹನ ಓಡಾಡುತ್ತಿದೆ. ಪ್ರತಿ ಬೀದಿಗೂ ವಾರದಲ್ಲಿ ಎರಡು ದಿನ ವಾಹನ ಸಂಚರಿಸಿದರೂ ಹೆದ್ದಾರಿ ಕಸದಿಂದ ಮುಕ್ತವಾಗಿಲ್ಲ ಎಂಬ ದೂರು ಜನರಿಂದ ಕೇಳಿ ಬರುತ್ತಿದೆ. ಕಸ ಸಾಗಿಸುವ ವಾಹನ ಸಂಚರಿಸುವಾಗ ಧ್ವನಿವರ್ಧಕ ಮೂಲಕ ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸಲಾಗುತ್ತಿದೆ. ವಾಹನಕ್ಕೆ ಕಸ ಹಾಕಲು ಸೂಚಿಸಿದರೂ ಕೆಲವರು ಉಡಾಫೆ ಮಾಡುತ್ತಿದ್ದಾರೆ. ನಮ್ಮಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆ ಸಹ ಇದೆ. ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಡುವಂತೆ ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸ್.ಸಿ.ವಿರೂಪಾಕ್ಷ ಹೇಳಿದರು.
ದಂಡಾಸ್ತ್ರ ಪ್ರಯೋಗ
ನಗರಸಭೆ ವ್ಯಾಪ್ತಿಯಲ್ಲಿ ಜನರು ಹಸಿ ಕಸ ಒಣ ಕಸ ಬೇರ್ಪಡಿಸಿ ಆಟೋಗಳಿಗೆ ಹಾಕಬೇಕು. ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಇಲ್ಲವಾದರೆ ನಗರಸಭೆಯಿಂದ ದಂಡಾಸ್ತ್ರ ಪ್ರಯೋಗಿಸಲಾಗುವುದು. ನರಸಿಂಹಮೂರ್ತಿ ಹಾಸನ ನಗರಸಭೆ ಆಯುಕ್ತ ಬೀದಿನಾಯಿ ಹೆಚ್ಚಳ ಪಂಚಾಯಿತಿಯವರು ಖಾಸಗಿ ಭೂಮಿಯಲ್ಲಿ ಕಸ ಹಾಕುತ್ತಿರುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ನಮ್ಮ ತೋಟಗಳಿಗೆ ಹೋಗಲು ತೊಂದೆಯಾಗಿದೆ. ಬೇಸಿಗೆಯಲ್ಲಿ ಕಸಕ್ಕೆ ಬೆಂಕಿ ಹಾಕುವುದರಿಂದ ಹೊಗೆ ಅವರಿಸಿಕೊಳ್ಳುತ್ತದೆ. ಕೆಲವು ಸಲ ತೆಂಗಿನ ಮರಕ್ಕೆ ಬೆಂಕಿ ತಗುಲಿ ಸುಟ್ಟು ಹೋಗಿವೆ. ಎಚ್.ಬಿ. ಶಿವಕುಮಾರ್ ಹಿರೀಸಾವೆ ಕಸ ಹಾಕಲು ಜಾಗ ಇಲ್ಲ ಹಿರೀಸಾವೆಯಲ್ಲಿ ನಿತ್ಯ ಟನ್‌ಗಟ್ಟಲೆ ಕಸ ಸಂಗ್ರಹವಾಗುತ್ತದೆ. ತ್ಯಾಜ್ಯ ವಿಲೇವಾರಿ ಮಾಡಲು ಜಾಗದ ಸಮಸ್ಯೆ ಇದೆ. ಕಸ ವಿಲೇವಾರಿ ಮಾಡಲು ಭೂಮಿ ನೀಡುವಂತೆ ಕಂದಾಯ ಇಲಾಖೆಗೆ ಹಲವು ವರ್ಷಗಳಿಂದ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಜಾಗ ನೀಡಿಲ್ಲ. ಸತೀಶ್ ಹಿರೀಸಾವೆ ಪಿಡಿಒ ಸ್ವಚ್ಛತೆಗೆ ಸಹಕರಿಸಿ ಹಳೇಬೀಡು ಸೇರಿದಂತೆ ಯಾವ ಗ್ರಾಮದಲ್ಲಿಯೂ ರಸ್ತೆ ಬದಿಯಲ್ಲಿ ಕಸ ಬೀಳದಂತೆ ಎಚ್ಚರ ವಹಿಸಿದ್ದೇವೆ. ಹೆದ್ದಾರಿ ಬದಿಯಲ್ಲಿ ಕಸದ ರಾಶಿ ಬೀಳುತ್ತಿದೆ. ಜನರು ಎಚ್ಚೆತ್ತುಕೊಂಡು ಕಸ ಹಾಕುವುದನ್ನು ನಿಲ್ಲಿಸಬೇಕು. ಹೆದ್ದಾರಿ ಇಲಾಖೆಯವರು ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಜೊತೆ ಕೈಜೋಡಿಸಬೇಕು. ನಿತ್ಯಾನಂದ ಹಳೇಬೀಡು ಗ್ರಾ.ಪಂ. ಅಧ್ಯಕ್ಷ ಗೊಬ್ಬರ ತಯಾರಿಕೆ ಸಂಗ್ರಹಿಸಿದ ಕಸವನ್ನು ಬಾಚನಹಳ್ಳಿ ಬಳಿ ಇರುವ ಕಸ ಸಂಗ್ರಹಣ ಕೇಂದ್ರಕ್ಕೆ ತರಲಾಗುತ್ತಿದ್ದು ಅಲ್ಲಿ ಕಸ ಬೇರ್ಪಡಿಸಿ ಗೊಬ್ಬರ ಹಾಗೂ ಒಣ ಕಸದ ವಿಲೇವಾರಿ ಮಾಡಲಾಗುತ್ತಿದೆ. ಜ್ಯೋತಿ ಆಲೂರು ಪ.ಪಂ. ಆರೋಗ್ಯ ನಿರೀಕ್ಷಕಿ ಸಮರ್ಪಕ ವಿಲೇವಾರಿ ಆಲೂರಿನಲ್ಲಿ ಕಸ ಸಂಗ್ರಹಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಪಟ್ಟಣದ 11 ವಾರ್ಡ್‌ಗಳಲ್ಲಿ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ. ತಾಹೀರಾಬೇಗಂ ಆಲೂರು ಪ.ಪಂ. ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.