ಹಾಸನ: ಅಂತರ ಜಿಲ್ಲಾ ಮನೆ ಕಳ್ಳನನ್ನು ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹ 20 ಲಕ್ಷ ಮೌಲ್ಯದ 500 ಗ್ರಾಂಚಿನ್ನದ ಆಭರಣ ಮತ್ತು 770 ಗ್ರಾಂಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿರುವ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ, ಆರ್.ಎಸ್. ಪಾಳ್ಯ ಗ್ರಾಮದ ಮಹಮ್ಮದ್ ಇಬ್ರಾಹಿಂ (34) ಬಂಧಿತ ಆರೋಪಿ.
ಈತ ಹಾಸನ ಜಿಲ್ಲೆಯಲ್ಲಿ 12, ಚಿಕ್ಕಮಗಳೂರು 6, ತುಮಕೂರು 5, ಶಿವಮೊಗ್ಗ 3 ಸೇರಿದಂತೆ ಒಟ್ಟು 26 ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ. 1ರಂದು ಅರಸೀಕೆರೆ ತಾಲ್ಲೂಕಿನ ಹಳೆಬಂಡಿ ಚಿಕ್ಕೋಡು ಗ್ರಾಮದ ಮಹಾಲಕ್ಷ್ಮಿ ಎಂಬುವವರು ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿ ಎಂದು ನೀಡಿದ ದೂರು ಆಧರಿಸಿ ವಿಶೇಷ ತಂಡ ರಚನೆ ಮಾಡಿ ತನಿಖೆ ಆರಂಭಿಸಿ ಆರೋಪಿಯನ್ನು ತುರುವೆಕೆರೆ ತಾಲ್ಲೂಕು ಮಾಯಸಂದ್ರ ಗ್ರಾಮದಲ್ಲಿ ಬುಧವಾರ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಹೇಳಿದರು.
ಮಹಮ್ಮದ್ ಇಬ್ರಾಹಿಂ ಬೈಕ್‌ನಲ್ಲಿ ಸುತ್ತಾಡುತ್ತಾ ಯಾವ ಮನೆ ಬೀಗ ಹಾಕಿದೆ ಎಂಬುದನ್ನು ಪತ್ತೆ ಮಾಡುತ್ತಿದ್ದ. ಹತ್ತು ನಿಮಿಷ ಅಲ್ಲಿಯೇ ಕಾಯ್ದು ಯಾರೂ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಬಳಿಕ ಹಿಂಬಾಗಿಲನ್ನು ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದನು ಎಂದು ತಿಳಿಸಿದರು.
ಆರೋಪಿಯ ಪತ್ತೆಯಲ್ಲಿ ಶ್ರಮಿಸಿದ ಅರಸೀಕೆರೆ ವಿಭಾಗದ ಡಿವೈಎಸ್ಪಿ ನಾಗೇಶ್, ಅರಸೀಕೆರೆ ಗ್ರಾಮಾಂತರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಂ. ವಸಂತ, ಬಾಣಾವರ ಠಾಣೆಯ ಪಿಎಸ್‌ಐ ಅರುಣ್, ಸಿಬ್ಬಂದಿಗಳಾದ ಎಚ್.ಹೀರಾಸಿಂಗ್, ನಂಜುಂಡೇಗೌಡ, ಲೋಕೇಶ್, ಎ.ಎಸ್.ನಾಗೇಂದ್ರ, ಶೇಖರೇಗೌಡ ಸಿರಿಗೆರೆ, ಹೇಮಂತ, ನಾಗರಾಜನಾಯ್ಕ, ನಾಗರಾಜು, ಮಧು, ಕೇಶವಮೂರ್ತಿ, ಪಾರ್ವತಮ್ಮ, ಶಕುಂತಲಾ, ಹರೀಶ್, ಜೀಪು ಚಾಲಕ ವಸಂತಕುಮಾರ್, ತಾಂತ್ರಿಕ ವಿಭಾಗದ ಪೀರ್ ಖಾನ್ ಹಾಗೂ ಪ್ರತಾಪ್ ಅವರನ್ನು ಎಸ್ಪಿ ಪ್ರಶಂಸಿಸಿ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.