ಅರಕಲಗೂಡು: ‘ಪಟ್ಟಣ ಪಂಚಾಯಿತಿ ಆಶ್ರಯ ಸಮಿತಿ ಮೂಲಕ ವಸತಿ ರಹಿತ ಬಡವರಿಗೆ ಶಾಸಕರು ನಿವೇಶನಗಳ ವಿತರಣೆಗೆ ಮುಂದಾದರೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ’ ಎಂದು ಆರೋಪಿಸಿ ಪ.ಪಂ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ವಿವಿಧ ಬಡಾವಣೆಯ ಫಲಾನುಭವಿಗಳೊಂದಿಗೆ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಕಚೇರಿ ಅವರಣದಿಂದ ಪ.ಪಂ ಅಧ್ಯಕ್ಷ ಹೂವಣ್ಣ ಅವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಕಾರರು ತಾಲ್ಲೂಕು ಕಚೇರಿಗೆ ಬಂದು ಕೆಲಕಾಲ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ‘352 ನಿವೇಶನಗಳ ವಿತರಣೆಯಾಗಬೇಕಿದೆ. ಈಗ 190 ಫಲಾನುಭವಿಗಳ ತಾತ್ಕಾಲಿಕ ಪಟ್ಟಿ ತಯಾರಿಸಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಅನರ್ಹರಿದ್ದರೆ ಯಾರು ಬೇಕಿದ್ದರೂ ದೂರು ನೀಡಿ ಲೋಪವನ್ನು ಪ್ರಶ್ನಿಸಬಹುದಾಗಿದೆ. ಅನರ್ಹರಿದ್ದಲ್ಲಿ ಅಂಥವರನ್ನು ಪಟ್ಟಿಯಿಂದ ಕೈಬಿಡಲಾಗುವುದು. ಇದರಲ್ಲಿ ಯಾವುದೇ ಸಂಶಯವಿಲ್ಲ. ನಿವೇಶನಗಳ ವಿತರಣೆಯಾದರೆ ಶಾಸಕರಿಗೆ ಹೆಸರು ಬರುತ್ತದೆ ಎಂಬ ಕಾರಣದಿಂದ ವಿತರಣೆ ತಡೆಗಟ್ಟಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಡವರು ಅರ್ಹರಿದ್ದರೆ ಅಂಥವರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಜನರು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ.ಪಂ ಸದಸ್ಯರಾದ ಪ್ರದೀಪ್ ಕುಮಾರ್, ಸುಬಾನ್ , ಲಕ್ಷ್ಮಣ, ಮುಖಂಡರಾದ ಚಿಕ್ಕಹೊನ್ನೇಗೌಡ, ಎನ್.ರವಿಕುಮಾರ್, ಮುನ್ನಾ, ಅಲೀಂ ಪಾಷಾ, ನಸ್ರುಲ್ಲಾ, ಮಂಜು, ಹರೀಶ್, ಸಣ್ಣಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.