ಹಾಸನ: ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ)ಯ ಮುಳುಗಡೆ ಸಂತ್ರಸ್ತರ ಭೂಮಿಮಂಜೂರಾತಿಯಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ವಹಿಸಬೇಕು ಎಂದು ದಲಿತ ವಿಮೋಚನಾ ಮಾನವ ಹಕ್ಕು ವೇದಿಕೆ ಸಂಚಾಲಕ ಮರಿ ಜೋಸೆಫ್ ಆಗ್ರಹಿಸಿದರು.
ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ 1970ರಲ್ಲೇ ಸಕಲೇಶಪುರದಲ್ಲಿ 33 ಸಾವಿರಎಕರೆ ಕಾಯ್ದಿರಿಸಲಾಗಿತ್ತು. ಕೃಷ್ಣಯ್ಯ ಜಿಲ್ಲಾಧಿಕಾರಿಯಾಗಿದ್ದ ವೇಳೆ ಆಲೂರು ತಾಲ್ಲೂಕಿನಲ್ಲಿ 19,159 ಎಕರೆ ಹಾಗೂ ಹೊಳೆನರಸೀಪುರ, ಬೇಲೂರು, ಅರಸೀಕೆರೆ ಮತ್ತು ಹಾಸನ ತಾಲ್ಲೂಕುಗಳಲ್ಲಿ 30 ಸಾವಿರ ಎಕರೆ ಭೂಮಿಯನ್ನು ನಿರಾಶ್ರಿತರಿಗೆ ಕಾಯ್ದಿರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಳುಗಡೆ ಸಂತ್ರಸ್ತರಿಗೆ ಕಾಯ್ದಿರಿಸಿದ 85 ಸಾವಿರ ಎಕರೆ ಪೈಕಿ 29 ಸಾವಿರ ಎಕರೆ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿಸಿಂಧೂರಿ ಎಸ್ಸಿ, ಎಸ್ಟಿ ಸಭೆಯಲ್ಲಿ ಮಾಹಿತಿ ನೀಡಿದ್ದರು. ನಂತರ ಬಂದ ಜಿಲ್ಲಾಧಿಕಾರಿ ಅಕ್ರಂಪಾಷಾ, ಎಚ್‌ಆರ್‌ಪಿ ಯಲ್ಲಿ ನಡೆದಿರುವ ಭೂ ಹಗರಣದ ತನಿಖೆಗಾಗಿ ಇಬ್ಬರುಉಪವಿಭಾಗಾಧಿಕಾರಿಗಳ ಸಮಿತಿ ರಚಿಸಿ, ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಮಾಡಿದ್ದರು ಎಂದು ವಿವರಿಸಿದರು.
‘ಸಮಿತಿಯ ವರದಿ ಪ್ರಕಾರ, 414 ಅಕ್ರಮ ಮಂಜೂರಾತಿ ಆಗಿದ್ದು, ಆ ಕಡತಗಳೆಲ್ಲಾ ನಾಪತ್ತೆಯಾಗಿವೆ. 216 ಪ್ರಕರಣಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, 30 ಪ್ರಕರಣದಲ್ಲಿ ಎರಡು ಬಾರಿ ಮಂಜೂರು ಮಾಡಿರುವುದು ತನಿಖೆ ವೇಳೆ ಕಂಡು ಬಂದಿದೆ. ಸಂಬಂಧಪಟ್ಟ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್‌ಗಳು, ತಹಶೀಲ್ದಾರ್ ಮತ್ತು ಸಂಬಂಧಪಟ್ಟ ವಿಶೇಷ ಭೂ ಸ್ವಾಧೀನಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ,ತನಿಖೆ ನಡೆಸಬೇಕು. ಆದರೆ, ಜಿಲ್ಲಾಧಿಕಾರಿ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್ ಒಂದೊಂದು ಹೇಳಿಕೆ ನೀಡಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ವಿಶೇಷ ಭೂ ಸ್ವಾಧೀನಾಧಿಕಾರಿ ಅವರು 1,950 ಫಲಾನುಭವಿಗಳಿಗೆ ನೋಟಿಸ್ ನೀಡಿ, ಭೂಮಿ ರದ್ದು ಮಾಡಿರುವುದಾಗಿ ಹೇಳಿದ್ದಾರೆ. ಹಾಗಾದರೆ ನಿಜವಾದ ಫಲಾನುಭವಿಗಳುಯಾರು? ಅಕ್ರಮ ಮಾಡಿರುವವರು ಯಾರು’ ಎಂದು ಪ್ರಶ್ನಿಸಿದರು.
‘ಎಚ್‌ಆರ್‌ಪಿ ಮುಳುಗಡೆ ಕುಟುಂಬಗಳ ಸಂಖ್ಯೆ 2,283. ಹಳ್ಳಿಗಳ ಸಂಖ್ಯೆ 46 . ಅಂದರೆ 3 ಸಾವಿರ ಮಂದಿ ಭೂಮಿ ಕಳೆದುಕೊಂಡಿದ್ದು, ಒಬ್ಬ ಫಲಾನುಭವಿಗೆ ತಲಾ ನಾಲ್ಕು ಎಕರೆಅಂದ್ರು ಕಾಯ್ದಿರಿಸಿದ್ದ 20,095 ಎಕರೆ ಸರಿ ಹೊಂದುತ್ತದೆ. ಆದರೆ, ಇಲ್ಲಿ ಅಕ್ರಮ ಎಸಗಿರುವವರು ಎಲ್ಲಾ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಇದ್ದಾರೆ.ಉಪವಿಭಾಗಾಧಿಕಾರಿ, ತಹಶೀಲ್ದಾರ್, ಪತ್ರಕರ್ತರು ಬೇನಾಮಿ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಇದೆ. ಈ ಕಾರಣದಿಂದ ಅಧಿಕಾರಿ ದಿನಕ್ಕೊಂದು ಹೇಳಿಕೆ ನೀಡುತ್ತ ತನಿಖೆಯದಿಕ್ಕು ತಪ್ಪಿಸುತ್ತಿದ್ದಾರೆ. ನೈಜ ಸಂತ್ರಸ್ತರಿಗೂ ಭೂಮಿ ಸಿಗದಂತೆ ಮಾಡಿದ್ದಾರೆ’ ಎಂದುಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಸತೀಶ್, ಹಾಸನ ಆದಿವಾಸಿಹೋರಾಟಗಾರ ಹೂರಾಜ್, ರಾಜೇಂದ್ರ, ಅಂಗಡಿಹಳ್ಳಿಯ ದಯಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.