ಹೆತ್ತೂರು (ಹಾಸನ): ಸಮೀಪದ ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಡಿ.4ರಂದು ನಡೆದ, ಅಂಬಾರಿ ಆನೆ ಅರ್ಜುನನ ಸಾವಿನ ಪ್ರಕರಣದ ತನಿಖೆ ಆರಂಭವಾಗಿದೆ. ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ನಿವೃತ್ತ ಮುಖ್ಯ ವನ್ಯ ಪಾಲಕ (ವನ್ಯಜೀವಿ ವಿಭಾಗ) ಅಜಯ್ ಮಿಶ್ರಾ ಹಾಗೂ ಅವರ ತಂಡ, ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಅರ್ಜುನ ಮತ್ತು ಕಾಡಾನೆ ನಡುವೆ ಕಾಳಗ ನಡೆದ ಪ್ರದೇಶಕ್ಕೆ ತೆರಳಿದ ತಂಡ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿತು. ಘಟನೆ ನಡೆದಾಗ ಹಾಜರಿದ್ದ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿತು.
ಆನೆಗಳ ಕಾಳಗದಲ್ಲಿ ಅಂಬಾರಿ ಆನೆ ಅರ್ಜುನ, ಕಾಡಾನೆ ದಾಳಿಯಿಂದ ಮೃತಪಟ್ಟಿತ್ತು. ಮೃತಪಡುವ ಮುನ್ನ ಅರ್ಜುನನ ಕಾಲಿಗೆ ಗುಂಡೇಟು ತಗುಲಿತ್ತು. ಇನ್ನೊಂದು ಸಾಕಾನೆ ಪ್ರಶಾಂತ್‌ಗೆ ಅರಿವಳಿಕೆ ಚುಚ್ಚುಮದ್ದು ಬಿದ್ದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ತನಿಖೆ ನಡೆಸಲು ತಂಡವನ್ನು ರಚಿಸಿದ್ದರು.
‘ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿದೆ. ಸ್ಥಳೀಯರು, ಅರಣ್ಯ ಇಲಾಖೆಯವರಿಂದ ಮಾಹಿತಿ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಲಾಗುವುದು. ಎಲ್ಲವನ್ನೂ ಕ್ರೋಡೀಕರಿಸಿ ವರದಿ ಸಲ್ಲಿಸಲಾಗುವುದು’ ಎಂದು ತಂಡದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.