ADVERTISEMENT

ಹಳೇಬೀಡು | ಜೈನರಗುತ್ತಿಯಲ್ಲಿ ಶಿಥಿಲನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ ಇಂದು

ರಾಜಸ್ತಾನದಿಂದ ಬಂದ ಪದ್ಮಾಸನದಲ್ಲಿ ಕುಳಿತಿರುವ ಮೂರ್ತಿ

ಎಚ್.ಎಸ್.ಅನಿಲ್ ಕುಮಾರ್
Published 27 ಅಕ್ಟೋಬರ್ 2024, 5:13 IST
Last Updated 27 ಅಕ್ಟೋಬರ್ 2024, 5:13 IST
ರಾಜಸ್ಥಾನದಿಂದ ಹಳೇಬೀಡು ಬಳಿಯ ಜೈನರಗುತ್ತಿಗೆ ಕ್ಷೇತ್ರಕ್ಕೆ ಶನಿವಾರ ಸಂಜೆ ಆಗಮಿಸಿದ ಶೀತಲನಾಥ ತೀರ್ಥಂಕರ ಮೂರ್ತಿಯನ್ನು ವೀರಸಾಗರ ಮುನಿಗಳು ನೇತೃತ್ವದಲ್ಲಿ ಜೈನ ಶ್ರಾವಕ- ಶ್ರಾವಕಿಯರು ಸ್ವಾಗತಿಸಿದರು.
ರಾಜಸ್ಥಾನದಿಂದ ಹಳೇಬೀಡು ಬಳಿಯ ಜೈನರಗುತ್ತಿಗೆ ಕ್ಷೇತ್ರಕ್ಕೆ ಶನಿವಾರ ಸಂಜೆ ಆಗಮಿಸಿದ ಶೀತಲನಾಥ ತೀರ್ಥಂಕರ ಮೂರ್ತಿಯನ್ನು ವೀರಸಾಗರ ಮುನಿಗಳು ನೇತೃತ್ವದಲ್ಲಿ ಜೈನ ಶ್ರಾವಕ- ಶ್ರಾವಕಿಯರು ಸ್ವಾಗತಿಸಿದರು.   

ಹಳೇಬೀಡು: 24 ಅಡಿ ಎತ್ತರದ ಬಿಳಿ ಗ್ರಾನೈಟ್ ಶಿಲೆಯ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶಿಥಿಲನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆಗೆ ಅಡಗೂರು ಜೈನರಗುತ್ತಿ ಸಿದ್ದವಾಗಿದ್ದು, ಕ್ಷಣಗಣನೆ ಆರಂಭವಾಗಿದೆ. ಅ.27 ರಂದು ಬೃಹತ್ ಮೂರ್ತಿಯ ಪ್ರತಿಷ್ಠಾಪನೆ ವೈಭವದಿಂದ ನಡೆಯಲಿದೆ.

ಒಂದು ವಾರದ ಹಿಂದೆ ರಾಜಸ್ಥಾನದಿಂದ ಮೂರ್ತಿ ಹಾಗೂ ಪೀಠವನ್ನು ಹೊತ್ತ ವಾಹನಗಳು 2200 ಕಿ.ಮೀ.ಕ್ರಮಿಸಿ ಶನಿವಾರ ಸಂಜೆ ಜೈನರಗುತ್ತಿಗೆ ತಲುಪಿದವು. ಜೈನ ಮುನಿ ವೀರಸಾಗರ ಮಹಾರಾಜರ ನೇತೃತ್ವದಲ್ಲಿ ಜೈನ ಶ್ರಾವಕ, ಶ್ರಾವಕಿಯರು ಶ್ರದ್ದಾಭಕ್ತಿಯಿಂದ ಬರ ಮಾಡಿಕೊಂಡರು. ನೆರೆದಿದ್ದ ಜೈನ್ ಸಮಾಜದವರು ಪಂಚವರ್ಣದ ಬಾವುಟ ಹಾಗೂ ಕಳಸ ಹಿಡಿದು 1 ಕಿ.ಮೀ. ಮೆರವಣಿಗೆಯಲ್ಲಿ ಜೈನರ ಗುತ್ತಿಗೆ ಬಂದು ಸೇರಿದರು. ಮೆರವಣಿಗೆ ಉದ್ದಕ್ಕೂ ಜಯಘೋಷದೊಂದಿಗೆ ಜಿನ ಗಾಯನ ಮೊಳಗಿತ್ತು.

ಜೈನರಗುತ್ತಿಗೆ ಮೂರ್ತಿ ತಲುಪುವ ಮೊದಲು ಹಳೇಬೀಡಿನಲ್ಲಿ ಜೈನ ಶ್ರಾವಕರು ಪುಷ್ಪವೃಷ್ಟಿಯೊಂದಿಗೆ ಮೂರ್ತಿಯನ್ನು ಸ್ವಾಗತಿಸಿದರು.

ADVERTISEMENT

ಅ.27 ರಂದು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲು ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಾನ ನಡೆಯಲಿದ್ದು, ಪುರೋಹಿತ ವರ್ಗ ಹಾಗೂ ಜೈನ ಸಮಾಜದವರು ಅಂತಿಮ ಹಂತದ ಸಿದ್ದತೆ ನೆರವೇರಿಸಿದರು. ಅಡಗೂರು, ಕಡದರವಳ್ಳಿ, ಹಾಸನ ಮೊದಲಾದ ಊರಿನ ಜೈನ ಸಮಾಜದವರು ಭಾಗವಹಿಸಿದ್ದರು. ಜೈನರಗುತ್ತಿ ಕ್ಷೇತ್ರದ ಸುತ್ತಲಿನ ಗ್ರಾಮಸ್ಥರು ಜಿನಮೂರ್ತಿಯ ದರ್ಶನ ಪಡೆದರು.

ಜೈನರ ಗುತ್ತಿ ಸಮಿತಿ ಪದಾಧಿಕಾರಿಗಳಾದ ಬ್ರಹ್ಮದೇವಯ್ಯ, ನೇಮಿರಾಜ ಆರಿಗ, ಮುಖಂಡರಾದ ಶಶಿಕುಮಾರ್, ನಾಗೇಂದ್ರ ಕುಮಾರ್, ಹೊಲಬಗೆರೆ ಕೀರ್ತಿ ಕುಮಾರ್, ಧಾವನ್ ಜೈನ್, ಧರಣೇಂದ್ರ, ನಾಗಚಂದ್ರ ಭಾಗವಹಿಸಿದ್ದರು.

ಛತ್ತೀಸಗಢದ ದುರ್ಗಾ ನಿವಾಸಿಗಳಾದ ದೇವೇಂದ್ರ ಕುಮಾರ್, ಬೀನಾ ದೇವಿ ಕಲಾ, ಸಂಜೀವ್ ಜೈನ್ ಮಯೂರಿ ಕಲಾ, ಸ್ನೇಹ ಜೈನ್, ನೇಹಾ ಜೈನ್ ಪರಿವಾರ ಶೀತಲನಾಥರ ಮೂರ್ತಿಯನ್ನು ದಾನವಾಗಿ ನೀಡಿದೆ ಎಂದು ವೀರಸಾಗರ ಮುನಿ ಮಹಾರಾಜರು ತಿಳಿಸಿದರು.

ದಕ್ಷಿಣ ಭಾರತದ ಜೈನ ಕ್ಷೇತ್ರಗಳು ವೀರ ಸಾಗರ ಮುನಿ ಮಹಾರಾಜರ ಮೇಲಿನ ಭಕ್ತಿಯಿಂದ ಛತ್ತೀಸಗಢದ ಭಕ್ತರು ಮೂರ್ತಿಯನ್ನು ದಾನವಾಗಿ ನೀಡಿದ್ದಾರೆ.
ನೇಮಿರಾಜ ಆರಿಗ, ಜೈನರಗುತ್ತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.