ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಚ್.ಡಿ.ದೇವೇಗೌಡರ ಸೊಸೆ ಭವಾನಿ ರೇವಣ್ಣ ಅಥವಾ ಮೊಮ್ಮಗ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಸೂರಜ್ ರೇವಣ್ಣ ಪೈಕಿ ಒಬ್ಬರು ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ, ಸೊಸೆಯೋ, ಮೊಮ್ಮಗನೋ ಎಂಬುದು ಕುತೂಹಲ ಮೂಡಿಸಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದರೂ ಈವರೆಗೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ.
ನಾಲ್ಕು ದಿನಗಳ ಹಿಂದೆ ನಡೆದ ಸಭೆಯಲ್ಲಿ ಬಹುತೇಕ ಪ್ರಮುಖರು ಭವಾನಿ ರೇವಣ್ಣ ಅವರ ಹೆಸರನ್ನೇ ಶಿಫಾರಸು ಮಾಡಿರುವುದರಿಂದ ಅವರೇ ಹುರಿಯಾಳಾಗಲಿದ್ದಾರೆ ಎನ್ನಲಾಗಿತ್ತು. ಪಕ್ಷದಲ್ಲಿ ವರ್ಚಸ್ಸು ಹಾಗೂ ಚುನಾವಣೆ ನಡೆಸುವ ತಂತ್ರಗಾರಿಕೆ ದೃಷ್ಟಿಯಿಂದಲೂ ಅವರು ಪ್ರಬಲ ಅಭ್ಯರ್ಥಿಯಾಗಲಿದ್ದಾರೆ ಎಂದು ಮುಖಂಡರು ಪ್ರತಿಪಾದಿಸಿದ್ದರು.
ಕಳೆದ ಬಾರಿಯೂ ಭವಾನಿ ಅವರು ಸ್ಪರ್ಧೆಗಿಳಿಯಬೇಕು ಎಂಬ ಒತ್ತಡ ಇತ್ತು. ಆದರೆ, ಪಟೇಲ್ ಶಿವರಾಂ ಅವರ ಪರ ದೇವೇಗೌಡರು ಒಲವು ವ್ಯಕ್ತಪಡಿಸಿದ್ದರಿಂದ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ.
ಕಾರ್ಯಕರ್ತರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವ ಉದ್ದೇಶದಿಂದ ಪಕ್ಷದ ನಾಯಕರು ವಿಧಾನಸಭಾ ಕ್ಷೇತ್ರವಾರು ಸಭೆ ಆಯೋಜಿಸಿ, ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈ ನಡುವೆ ಸೂರಜ್ ರೇವಣ್ಣ ಅವರ ಹೆಸರು ಮುನ್ನಲೆಗೆ ಬಂದಿದೆ. ಅವರನ್ನೇ ಕಣಕ್ಕಿಳಿಸಲು ಕುಟುಂಬದವರು ಒಲವು ತೋರುತ್ತಿದ್ದಾರೆ ಎನ್ನಲಾಗಿದೆ.
‘ಈ ಚುನಾವಣೆಯಲ್ಲಿ ಪಕ್ಷಗಳ ಪ್ರಾಬಲ್ಯದ ಜತೆಗೆ ಆರ್ಥಿಕ ಸಂಪನ್ಮೂಲವೂ ಮುಖ್ಯ. ಹಾಗಾಗಿ ಆರ್ಥಿಕವಾಗಿ ಬಲಾಢ್ಯರಾದ ಅಭ್ಯರ್ಥಿಗಳನ್ನೇ ಎಲ್ಲ ಪಕ್ಷಗಳೂ ಸ್ಪರ್ಧೆಗಿಳಿಸಬೇಕಾಗಿದೆ. ಹಾಗಾಗಿ ಜೆಡಿಎಸ್‌ನಲ್ಲಿ ಗೌಡರ ಕುಟುಂಬದವರೇ ಸ್ಪರ್ಧೆಗಿಳಿಯಲಿದ್ದಾರೆ’ ಎಂಬ ಸುದ್ದಿ ಹರಿದಾಡುತ್ತಿದೆ.
ಕಾರ್ಯಕರ್ತರು ಎಷ್ಟೇ ಒತ್ತಡ ಹೇರಿದರೂ, ಜಿಲ್ಲೆಯ ಮಟ್ಟಿಗೆ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಅಂತಿಮವಾಗಿ ರೇವಣ್ಣ ಅವರೇ ಕೈಗೊಳ್ಳುತ್ತಾರೆ. ಆದರೆ, ಕುಟುಂಬದವರೇ ಆಕಾಂಕ್ಷಿಗಳಾಗಿರುವುದರಿಂದ ದೇವೇಗೌಡರ ಅಂತಿಮ ತೀರ್ಮಾನದ ಕಡೆ ಎಲ್ಲರ ಚಿತ್ತ ನೆಟ್ಟಿದೆ. ಕುಟುಂಬದ ಸದಸ್ಯರಿಗೇ ಮಣೆ ಹಾಕುತ್ತಾರೋ, ಅಥವಾ ಹೊರಗಿನವರಿಗೆ ಅವಕಾಶ ಕೊಡುತ್ತಾರೋ ಎಂಬುದು ಕುತೂಹಲ ಕೆರಳಿಸಿದೆ.
***
ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಭವಾನಿ ರೇವಣ್ಣ ಹೆಸರು ಕೇಳಿ ಬರುತ್ತಿರುವ ಕುರಿತು ದೇವೇಗೌಡರ ಗಮನಕ್ಕೆ ತರಲಾಗುವುದು. ಅವರದ್ದೇ ಅಂತಿಮ ತೀರ್ಮಾನ
-ಎಚ್.ಡಿ.ರೇವಣ್ಣ,ಹೊಳೆನರಸೀಪುರ ಕ್ಷೇತ್ರದ ಶಾಸಕ
***
ವಿಧಾನ ಪರಿಷತ್‌ಗೆ ಮಹಿಳೆಯರು ಆಯ್ಕೆಯಾದರೆ ಕಚೇರಿಯಿಂದ ಕಚೇರಿಗೆ ಅಲೆದು ಕೆಲಸ ಮಾಡುವುದು ಕಷ್ಟ. ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
–ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.