ADVERTISEMENT

ಕಾಂಗ್ರೆಸ್‌ ಸರ್ಕಾರದಲ್ಲಿ ಅಭದ್ರತೆ: ಜೆಡಿಎಸ್‌ ನಾಯಕ ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 13:04 IST
Last Updated 12 ನವೆಂಬರ್ 2023, 13:04 IST
<div class="paragraphs"><p>ಜೆಡಿಎಸ್ ಮುಖಂಡ, ಮಾಜಿ ಶಾಸಕ ಸುರೇಶ್ ಗೌಡ</p></div>

ಜೆಡಿಎಸ್ ಮುಖಂಡ, ಮಾಜಿ ಶಾಸಕ ಸುರೇಶ್ ಗೌಡ

   

ಹಾಸನ: 'ಕಾಂಗ್ರೆಸ್ ಸರ್ಕಾರದಲ್ಲಿ ಅಭದ್ರತೆ ಕಾಡುತ್ತಿದೆ. ಜನಗಳ ಮನಸ್ಸನ್ನು ಬೇರೆ ಕಡೆ ತಿರುಗಿಸಲು ಇತರೆ ಪಕ್ಷದ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ' ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದರು.

ಪತ್ನಿ ಸಮೇತ ಹಾಸನಾಂಬ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಒಂದು ಬಸ್‌ನಲ್ಲಿ ಎಷ್ಟು ಜನ ಹೋಗಬಹುದು. ಅದಕ್ಕಿಂತ ಹೆಚ್ಚಾದರೆ.ಆ ಬಸ್ಸಿನ ಕತೆ ಏನಾಗುತ್ತದೆ? ಅದೇ ರೀತಿ ಕಾಂಗ್ರೆಸ್‌ ಕಥೆ ಆಗುತ್ತದೆ. ಈಗಾಗಲೇ ಅವರ ಪಕ್ಷದವರೇ ತುಂಬಿಹೋಗಿದ್ದು, ಬೇರೆ ಪಕ್ಷದವರನ್ನು ಕರೆದುಕೊಂಡು ಹೋಗಿ ಸಿಂಕ್ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು .

ADVERTISEMENT

ನಮ್ಮದು ಪ್ರಾದೇಶಿಕ ಪಕ್ಷ. ಪ್ರಾದೇಶಿಕ ಪಕ್ಷಗಳನ್ನ ಅಷ್ಟು ಸುಲಭವಾಗಿ ಕಟ್ಟುವುದಾಗಲಿ, ಮುಗಿಸುವುದಾಗಲಿ ಆಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕೆಂದು ಬಹಳ ದಿನಗಳಿಂದ ಪ್ರಯತ್ನ ನಡೆಯುತ್ತಿದೆ. ಇದಕ್ಕೆಲ್ಲ ಜನತೆ ಲೋಕಸಭೆ ಚುನಾವಣೆ ವೇಳೆ ಉತ್ತರ ನೀಡುತ್ತಾರೆ ಎಂದರು.

136 ಮಂದಿ ಶಾಸಕರಿರುವ ಸರ್ಕಾರ, ಬೇರೆ ಪಕ್ಷದ ಶಾಸಕರನ್ನು ಆಪರೇಷನ್ ಹಸ್ತ ಮಾಡ್ತೀನಿ ಎಂದರೆ, ಅದರ ಅರ್ಥ ಏನು? ಈ ಸರ್ಕಾರ ಸುಭದ್ರವಾಗಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದರು.

ನಮ್ಮ ಪಕ್ಷಕ್ಕೆ ಹಲವಾರು ಜನರು ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ನಮ್ಮ ಪಕ್ಷ ಪುಟಿದು ಏಳುತ್ತದೆ. ಮುಂದಿನ ದಿನಗಳಲ್ಲಿ ಜನರೇ ಇದನ್ನೆಲ್ಲಾ ತೋರಿಸುತ್ತಾರೆ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸುರೇಶ್ ಗೌಡ, ಅದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಟೇಕಾಫ್ ಆಗಿಲ್ಲ. ಗ್ಯಾರಂಟಿಗಳನ್ನು ಕಟ್ಟಿಕೊಂಡು ಯಾಮಾರಿಸುತ್ತಿದ್ದಾರೆ. ಶೇ 20 ರಷ್ಟು ಜನಗಳಿಗೆ ದುಡ್ಡು ಬಂದಿಲ್ಲ. ಸರ್ಕಾರ ಸುಳ್ಳು ಹೇಳುತ್ತಿದ್ದು, ನಮ್ಮ ಕ್ಷೇತ್ರದಲ್ಲಿ 2 ಗಂಟೆ ವಿದ್ಯುತ್ ಕೊಡುತ್ತಿದ್ದಾರೆ ಎಂದು ದೂರಿದರು.

ಇದರ ಜೊತೆ ಸುಳ್ಳುಗಳನ್ನು ಹೇಳಿಕೊಂಡು ಹೋಗುತ್ತಿದ್ದು, ಬರ ಬಂದು ರೈತರು ಸಾಯುತ್ತಿದ್ದಾರೆ. ಕೃಷಿ ಸಚಿವರು ಒಂದು ಬಾರಿಯೂ ರೈತರ ಜಮೀನಿಗೆ ತೆರಳಿ ಕಷ್ಟವನ್ನು ಆಲಿಸಿಲ್ಲ. ಕೃಷ್ಣ ಬೈರೇಗೌಡರು ಹೇಳಿರುವ ಹಾಗೂ ಅಧಿಕಾರಿಗಳು ಕೊಟ್ಟಿರುವ ವರದಿ ಸುಳ್ಳು ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಸರಿಯಾದ ಆಡಳಿತ ಇಲ್ಲ 224 ಕ್ಷೇತ್ರದಲ್ಲಿ ಅಭಿವೃದ್ಧಿಗೆ ಬಿಡಿಗಾಸಿ ಬಿಡುಗಡೆ ಮಾಡಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಶೇ 40 ಕಮಿಷನ್ ವಿಚಾರದಲ್ಲಿ ತನಿಖೆ ಮಾಡಲಿಲ್ಲ. ಕೆಂಪಣ್ಣ ಅವರ ಪ್ರಕಾರ ನಿಮ್ಮದು ಶೇ 60 ಕಮಿಷನ್ ವ್ಯವಹಾರ ನಡೆಯುತ್ತಿದೆ. ಇಂತಹ ಕೆಟ್ಟ ಸರ್ಕಾರಗಳು ಇರಬಾರದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.