ಹಾಸನ: ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಸನಾಂಬ ದೇವಾಲಯದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ‘ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಡೆಗಣಿಸಿದ್ದಾರೆ. ನಾನು ಜನರಿಗೆ ಉತ್ತರಿಸಬೇಕಾಗಿದೆ. ಜಿಲ್ಲಾಧಿಕಾರಿ ನಡವಳಿಕೆಯಿಂದ ಜೆಡಿಎಸ್ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರು ಅಸಮಾಧಾನಗೊಂಡಿದ್ದು ಪ್ರತಿಭಟನೆಗೆ ಕಾರಣವಾಗಿದೆ’ ಎಂದರು.
‘ದೇವಾಲಯದ ನೂತನ ಕಳಸ ಪ್ರತಿಷ್ಠಾಪನೆಗೂ ನನ್ನನ್ನು ಆಹ್ವಾನಿಸಿಲ್ಲ. ದೇವಾಲಯದಲ್ಲಿ ಜಿಲ್ಲಾಧಿಕಾರಿಗಳು ಪತಿಯೊಂದಿಗೆ ಹೋಮ ಹವನ ಮಾಡಿದ್ದು, ತಮ್ಮ ಸಂಬಂಧಿಕರನ್ನು ಕರೆದು ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು
‘ಹೆಲಿಟೂರಿಸಂ ಉದ್ಘಾಟನೆ, ಪ್ಯಾರಾ ಸೈಲಿಂಗ್ ಹಾಗೂ ಇತರೆ ಕಾರ್ಯಕ್ರಮಗಳಿಗೆ ನನ್ನನ್ನು ಕರೆದಿಲ್ಲ. ಬರಗಾಲದಂತ ಪರಿಸ್ಥಿತಿಯಲ್ಲಿ ಹೆಲಿಟೂರಿಸಂಗೆ ಒಬ್ಬರಿಗೆ ₹4,300 ದರ ನಿಗದಿ ಮಾಡಿದ್ದಾರೆ. ಇಷ್ಟೊಂದು ಹಣ ಏಕೆ ನಿಗದಿ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ, ಜಿಲ್ಲಾಧಿಕಾರಿ ಹಾರಿಕೆಯ ಉತ್ತರ ನೀಡುತ್ತಾರೆ’ ಎಂದು ದೂರಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳನ್ನು ಸ್ವರೂಪ್ ಪ್ರಕಾಶ್ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ತರಾಟೆಗೆ ತೆಗೆದುಕೊಂಡರು. ‘ಬರಗಾಲದಂತಹ ಸಂದರ್ಭದಲ್ಲಿ ಕಚೇರಿಯಲ್ಲಿ ಇದ್ದು, ಜನರ ಸಮಸ್ಯೆ ಆಲಿಸಬೇಕಾದ ನೀವು ಕುಟುಂಬದ ಸದಸ್ಯರೊಂದಿಗೆ ಹೋಮ–ಹವನ ಕಾರ್ಯಕ್ರಮ ಮಾಡಿರುವುದು ಖಂಡನಾರ್ಹ’ ಎಂದರು.
‘ದೇವಾಲಯದ ಕಾರ್ಯಕ್ರಮಕ್ಕೆ ನನ್ನನ್ನು ಏಕೆ ಕರೆದಿಲ್ಲ. ಅದನ್ನು ಹೇಳಿ’ ಎಂದ ಸ್ವರೂಪ್, ‘ಸ್ಥಳೀಯ ಶಾಸಕನಾಗಿ ನಾನು ದನ ಕಾಯಲು ಇರೋದಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ‘ಧಾರ್ಮಿಕ ದತ್ತಿ ಇಲಾಖೆ ಆಗಮಿಕರು ಹೇಳಿದಂತೆ ಮಾಡಲಾಗಿದೆ’ ಎಂದರು.
ಇದಕ್ಕೆ ಒಪ್ಪದ ಸ್ವರೂಪ್, ಕಳಸ ಪ್ರತಿಷ್ಠಾಪನೆಯನ್ನು ಶಾಸ್ತ್ರೋಕ್ತವಾಗಿ ಮಾಡಬೇಕು. ಶೃಂಗೇರಿ ಶ್ರೀಗಳನ್ನು ಕರೆಸಿ, ಹೋಮ, ಹವನ ಮಾಡಬೇಕು’ ಎಂದು ತಮ್ಮ ತಂದೆ ಎಚ್.ಎಸ್. ಪ್ರಕಾಶ್ ಅವರ ಕಾಲದಲ್ಲಿ ನಡೆದಿದ್ದ ಕಳಸ ಪ್ರತಿಷ್ಠಾಪನೆಯ ಚಿತ್ರಗಳ ಅಲ್ಬಂ ಪ್ರದರ್ಶಿಸಿದರು.
ಈ ವೇಳೆ ಸ್ವರೂಪ್ ಜೊತೆಗಿದ್ದ ನಗರಸಭೆ ಸದಸ್ಯರು, ಜೆಡಿಎಸ್ ಮುಖಂಡರು, ಜಿಲ್ಲಾಧಿಕಾರಿ ಜೊತೆ ವಾಗ್ವಾದಕ್ಕೆ ಮುಂದಾದರು. ಇದರಿಂದ ಬೇಸತ್ತ ಜಿಲ್ಲಾಧಿಕಾರಿ ಸತ್ಯಭಾಮಾ, ದೇಗುಲದ ಆವರಣದಿಂದ ಹೊರನಡೆದರು.
ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಹರಿದಾಡಿದ ವಿಡಿಯೊ: ದೇಗುಲದ ಕಳಸ ಪ್ರತಿಷ್ಠಾಪನೆಯ ನಿಮಿತ್ತ ಶುಕ್ರವಾರ ಸಂಜೆ ದೇಗುಲದಲ್ಲಿ ಹೋಮ–ಹವನ ನಡೆದಿದ್ದು, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಅವರ ಪತಿ ಹಾಗೂ ಕುಟುಂಬದವರು ಪಾಲ್ಗೊಂಡಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದು ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.