ಹಳೇಬೀಡು (ಹಾಸನ ಜಿಲ್ಲೆ): ಅಡಗೂರು ಜೈನರಗುತ್ತಿ ಕ್ಷೇತ್ರದ ಭೂಮಿಯಲ್ಲಿ ಹುದುಗಿದ್ದ, ಪ್ರಾಚೀನ ಕಾಲದ ಐದು ಜಿನಮೂರ್ತಿಗಳನ್ನು ಜೈನ ಮುನಿ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಶುಕ್ರವಾರ ಬೆಳಿಗ್ಗೆ ಶಾಸ್ತ್ರೋಕ್ತವಾಗಿ ಹೊರತೆಗೆಯಲಾಯಿತು.
ಎರಡುಅಡಿ ಎತ್ತರದ ಮುನಿಸುವ್ರತ ತೀರ್ಥಂಕರ, 1.5 ಅಡಿ ಎತ್ತರದ ಆದಿನಾಥ ತೀರ್ಥಂಕರ, 1 ಅಡಿಯ ಪಾರ್ಶ್ವನಾಥ ತೀರ್ಥಂಕರ, 1 ಅಡಿ ಎತ್ತರ ಜೈನ ಯಕ್ಷಿಯ ಕಲ್ಲಿನ ವಿಗ್ರಹ ಹಾಗೂ 3 ಇಂಚಿನ ಪದ್ಮಾವತಿ ಮೂರ್ತಿ ದೊರಕಿದೆ. ಆದಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣದ ದಿನದಂದು, ಜಿನಮೂರ್ತಿಗಳು ದೊರಕಿರುವುದು ಜಿನ ಭಕ್ತರಲ್ಲಿ ಸಂತಸ ಉಂಟು ಮಾಡಿದೆ.
ಸಂಪ್ರದಾಯ ಪ್ರಕಾರ, ಭೂಮಿಯಿಂದ ಹೊರತೆಗೆದ ಪ್ರಾಚೀನ ಮೂರ್ತಿಗಳಿಗೆ 27 ಕಳಸದಿಂದ ಜಲಾಭಿಷೇಕ ಮಾಡಲಾಯಿತು.
‘ಭೂಮಿ ಸಮತಟ್ಟು ಮಾಡುವ ಸಲುವಾಗಿ, ಕೆಲ ದಿನಗಳ ಹಿಂದೆ ಜೆಸಿಬಿಯಿಂದ ಮಣ್ಣಿನ ಮೇಲ್ಪದರವನ್ನು ತೆಗೆದಾಗ ಜಿನಮೂರ್ತಿಯ ತಲೆಯ ಭಾಗ ಹೊರ ಬಂದಿತ್ತು. ವಿಗ್ರಹದ ಸುತ್ತ ಮಣ್ಣನ್ನು ಸರಿಸಿ ನೋಡಿದಾಗ ಜಿನಮೂರ್ತಿ ಎಂಬುದು ಖಚಿತವಾಯಿತು. ಕನಸಿನಲ್ಲಿಯೂ ಹತ್ತಾರು ಪ್ರಾಚೀನ ಮೂರ್ತಿಗಳು ಕಾಣಿಸಿಕೊಂಡವು.ಮತ್ತಷ್ಟು ಮೂರ್ತಿಗಳು ಜೈನರ ಗುತ್ತಿಯಲ್ಲಿ ದೊರಕಲಿವೆ’ ಎಂದು ವೀರಸಾಗರ ಮುನಿ ಮಹಾರಾಜರು ತಿಳಿಸಿದರು.
‘ಜೈನರಗುತ್ತಿಯಲ್ಲಿ ಪತ್ತೆಯಾಗಿರುವ ಜಿನಮೂರ್ತಿಗಳಲಕ್ಷಣಗಳನ್ನು ಆಧರಿಸಿ, ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಗುರುತಿಸಬಹುದು’ ಎಂದುಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ ಎ.ವಿ.ನಾಗನೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.