ಕೊಣನೂರು: ಹೋಬಳಿಯ ಹೊನಗಾನಹಳ್ಳಿ ಗ್ರಾಮದ ಕೆರೆಯಂಗಳ ದಲ್ಲಿ ಮುಚ್ಚಿ ಹೋಗಿದ್ದ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಿದ್ದು, ಈಗ ನೀರು ಸಂಗ್ರಹಗೊಂಡು ಜೀವಕಳೆಯಿಂದ ಕಂಗೊಳಿಸುತ್ತಿದೆ.
ಈ ಕಲ್ಯಾಣಿಯು ಶಿಥಿಲಗೊಂಡು ಮಣ್ಣು, ಕಸದಿಂದ ಮುಚ್ಚಿ ಹೋಗಿತ್ತು. ಇಲ್ಲಿ ಕಲ್ಯಾಣಿ ಇದೆ ಎಂಬ ಕುರುಹು ಸಹ ಸಿಗದಂತಾಗಿತ್ತು. ಇದನ್ನು ಪತ್ತೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಿದ್ದಾರೆ.
ಗ್ರಾಮದ ಕೆರೆ 7 ಎಕರೆ 5 ಗುಂಟೆ ವಿಸ್ತೀರ್ಣ ಹೊಂದಿದೆ. ಇದಕ್ಕೆ ಹೊಂದಿ ಕೊಂಡಂತೆ 70X70 ವಿಸ್ತೀರ್ಣದ ಕಲ್ಯಾಣಿಯನ್ನು ₹10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸುಮಾರು 100 ವರ್ಷಗಳ ಹಿಂದೆ ಈ ಕಲ್ಯಾಣಿಯನ್ನು ನಿರ್ಮಿಸಿದ್ದು, ಪ್ರತಿನಿತ್ಯ ದೇವಾಲಯ ಉಪಯೋಗಕ್ಕೆ ಇದೇ ಕಲ್ಯಾಣಿಯ ನೀರನ್ನು ಬಳಸಲಾಗುತ್ತಿತ್ತು. ಗ್ರಾಮದ ಜನರಿಗೂ ಕುಡಿಯುವ ನೀರಿನ ಮೂಲವಾಗಿತ್ತು. ಆದರೆ, ಕಾಲಾನಂತರದಲ್ಲಿ ಕಲ್ಯಾಣಿ ಶಿಥಿಲಗೊಂಡು ಮುಚ್ಚಿ ಹೋಗಿತ್ತು.
ಕಲ್ಯಾಣಿಯನ್ನು ಪುನರುಜ್ಜೀವನ ಗೊಳಿಸಿದ ಬಳಿಕ ಶುದ್ಧ ನೀರು ಸಂಗ್ರಹ ಗೊಂಡಿದೆ.
ಹೀಗಾಗಿ, ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಕಲ್ಯಾಣಿಗೆ ಗುರುವಾರ ಪೂಜೆ ಸಲ್ಲಿಸಿ ದರು. ಕೆರೆಯ ಸುತ್ತ ಗಿಡಗಳನ್ನು ನೆಡುವ ಕಾರ್ಯಕ್ಕೂ ಚಾಲನೆ ನೀಡಿದರು.
‘ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ಅವರ ಪ್ರಯತ್ನದ ಫಲವಾಗಿ ಕಲ್ಯಾಣಿಗೆ ಮರುಜೀವ ಬಂದಿದೆ. ಪ್ರತಿ ಗ್ರಾಮದಲ್ಲೂ ಕೆರೆಕಟ್ಟೆ, ಕಲ್ಯಾಣಿಗಳಿದ್ದು, ಅವುಗಳನ್ನು ಸಂರಕ್ಷಿಸಬೇಕು. ಶಿಥಿಲಾವಸ್ಥೆಯಲ್ಲಿದ್ದರೆ ಪುನರುಜ್ಜೀವನಗೊಳಿಸಬೇಕು’ ಎಂದು ಎ.ಟಿ.ರಾಮಸ್ವಾಮಿ ಹೇಳಿದರು.
***
ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಜಲಮೂಲಗಳನ್ನು ಉಳಿಸಿಕೊಳ್ಳಬೇಕು.
-ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.