ಸಕಲೇಶಪುರ: ‘ಸಮಾಜದಲ್ಲಿ ಮನುಷ್ಯರನ್ನು ಜಾತಿ ಹೆಸರಿನಲ್ಲಿ ಮೇಲು ಕೀಳು ಎಂದು ಅವಮಾನಿಸುತ್ತಿದ್ದ ವ್ಯವಸ್ಥೆಯನ್ನು ಕನಕದಾಸರು 16ನೇ ಶತಮಾನದಲ್ಲಿಯೇ ತನ್ನ ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಶ್ರಮಸಿದ್ದ ಒಬ್ಬ ಮಹಾನ್ ವ್ಯಕ್ತಿ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕನಕದಾಸ ಜಯಂತ್ಯೋತ್ಸವದಲ್ಲಿ ಮಾತನಾಡಿದರು.
‘ಇತಿಹಾಸದ ಪುಟಗಳನ್ನು ತಿರುವಿದರೆ, ಮನುಷ್ಯರ ನಡುವೆ ಅಡ್ಡ ಗೋಡೆಯಾಗಿರುವ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಿ ಸಮಾನತೆ ಮೂಡಿಸಲು 12ನೇ ಶತಮಾನದಲ್ಲಿ ಬಸವಣ್ಣ, ಕನಕದಾಸ ಹೀಗೆ ಹಲವು ಮಹಾನ್ ನಾಯಕರು ಶ್ರಮಿಸಿದ್ದಾರೆ. ಅವರೆಲ್ಲ ಇಂದು ನಮ್ಮ ಕಣ್ಣಮುಂದೆ ಇಲ್ಲದೆ ಇದ್ದರೂ ಅವರ ಸಂದೇಶಗಳು ಜೀವಂತವಾಗಿರುತ್ತವೆ. ಅಷ್ಟೇ ಅಲ್ಲ ಎಲ್ಲಾ ಕಾಲಕ್ಕೂ ಮನುಷ್ಯರ ಬದಲಾವಣೆಗೆ ಮಾರ್ಗದರ್ಶಿಯಾಗಿವೆ’ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿದ್ದೇಶ್ ಮುಖ್ಯ ಉಪನ್ಯಾಸ ನೀಡಿ, ‘ಮಹಾತ್ಮರನ್ನು ಜಾತಿ ಆಧಾರದಲ್ಲಿ ಗುರುತಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅಂಬೇಡ್ಕರ್, ವಾಲ್ಮೀಕಿ, ಬಸವಣ್ಣರವರಂತಹ ಮಹಾತ್ಮರನ್ನು ಈಗಾಗಲೇ ಕೆಲವೆ ಕೆಲವು ಸಮಾಜಕ್ಕೆ ಸೀಮಿತ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಹಾತ್ಮರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಅವರ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ನೋಡಬೇಕು. ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣನ ದರ್ಶನಕ್ಕೆ ಉಡುಪಿಗೆ ಹೋದಾಗ ಮೇಲ್ವರ್ಗದವರು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆ ಹಾಡಲು ಆರಂಭಿಸಿದರು. ಆಗ ಆದ ಪವಾಡ ಅಂದ್ರೆ ಶ್ರೀಕೃಷ್ಣ ಹಿಂದೆ ತಿರುಗಿ ಗೋಡೆ ಕಿಂಡಿ ಮೂಲಕ ದರ್ಶನ ನೀಡಿದನಂತೆ. ಭಗವಂತ ಕೇವಲ ಮೇಲ್ವರ್ಗದವರ ಸೊತ್ತಲ್ಲ ಎಂದು ಇದರಿಂದ ತಿಳಿದು ಬರುತ್ತದೆ’ ಎಂದರು.
‘ಕನಕದಾಸರು ಸುಮಾರು 316ಕ್ಕೂ ಹೆಚ್ಚು ಕೀರ್ತನೆ ರಚಿಸಿದರು. ಇದರಲ್ಲಿ ಮೋಹನ ತರಂಗಿಣಿ ಅತ್ಯಂತ ಪ್ರಮುಖ ಕೀರ್ತನೆ. ಇವರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಕೀರ್ತನೆ ರಚಿಸಿದರು. ಕುಲು ಕುಲವೆಂದು ಹೊಡೆದಾಡಬೇಡಿ, ಬಡತನ ಬಂದಾಗ ನೆಂಟರ ಮನೆಯ ಬಾಗಿಲ ಬಡಿಯಬಾರದು ಎಂದೆಲ್ಲಾ ಹೇಳಿ ಸಮಾಜವನ್ನು ಜಾಗೃತಗೊಳಿಸಿದರು’ ಎಂದರು.
ಉಪವಿಭಾಗಾಧಿಕಾರಿ ಡಾ.ಶೃತಿ, ತಹಶೀಲ್ದಾರ್ ಜಿ.ಮೇಘನಾ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ತಾಲ್ಲೂ ಕುರುಬ ಸಮಾಜದ ಅಧ್ಯಕ್ಷ ರಾಮೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.