ಹಾಸನ: ‘ನಾವು ಯಾರನ್ನೂ ಸಮಾಧಾನ ಮಾಡಲು ಹೋಗುವುದಿಲ್ಲ. ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಏನು ಮಾಡಿದ್ದೇವೆ ಎಂದು ರಣರಂಗದಲ್ಲಿ ಉತ್ತರಿಸುವೆ ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ ಎಂದು ಶಾಸಕ
ಕೆ.ಎಂ.ಶಿವಲಿಂಗೇಗೌಡ ಎಚ್.ಡಿ.ಕುಮಾರಸ್ವಾಮಿ ಬಳಿ ಹೇಳಿದ್ದಕ್ಕೆ ನಮ್ಮ ಬಳಿ ದಾಖಲೆ ಇದೆ. ಇದು ಸುಳ್ಳಾದರೆ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.
‘ಅರಸೀಕೆರೆ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕುರುಬ ಸಮಾಜದ ಮತಗಳು ಈ ಬಾರಿ ಜೆಡಿಎಸ್‌ಗೆ ಬರುವುದಿಲ್ಲ ಎಂಬ ಕಾರಣದಿಂದ ಶಿವಲಿಂಗೇಗೌಡರು ಪಕ್ಷ ತೊರೆದಿದ್ದು, ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.
‘ಅರಸೀಕೆರೆ ಅಭಿವೃದ್ಧಿಗೆ ಸಿದ್ದರಾಮಯ್ಯ ಕಾರಣ ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ಆದರೆ, ಅವರನ್ನು ಶಾಸಕನ್ನಾಗಿ ಮಾಡಿದ್ದು ಜೆಡಿಎಸ್. 15 ವರ್ಷ ಪಕ್ಷದಿಂದ ಅಧಿಕಾರ ಅನುಭವಿಸಿದ ಅವರು, ಈಗ ಇಂಥ ಹೇಳಿಕೆ ಕೊಡುತ್ತಿರುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.
‘ಹಣ ಇದೆ ಅದಕ್ಕಾಗಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಯಾರ ಬಳಿ ಹಣವಿದೆ ಎಂದು ಅವರ ಪಕ್ಷ ಮುಖಂಡ ಕೆ.ಆರ್. ರಮೇಶ್‌ಕುಮಾರ್ ಅವರೇ ಹೇಳಿದ್ದಾರೆ’ ಎಂದು ತಿರುಗೇಟು ನೀಡಿದರು.
ಕಡೂರು: ಧನಂಜಯ್ ಜೆಡಿಎಸ್ ಅಭ್ಯರ್ಥಿ
ಹಾಸನ: ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾಗಿ ಸಿ.ಎಂ.ಧನಂಜಯ್ ಹೆಸರು ಘೋಷಣೆ ಮಾಡಲಾಗಿದೆ.
ಪಕ್ಷದ ಚಿಕ್ಕಮಗಳೂರು ಜಿಲ್ಲಾ ಘಟಕದ ಮುಖಂಡರೊಂದಿಗೆ ಚರ್ಚಿಸಿದ ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಈ ಘೋಷಣೆ ಮಾಡಿದರು. ಮಾರ್ಚ್ 18ಕ್ಕೆ ಕಡೂರಿನಲ್ಲಿ ಪಂಚರತ್ನ ಯಾತ್ರೆ ನಡೆಸಲು ನಿರ್ಧರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.