ಅರಸೀಕೆರೆ(ಹಾಸನ): ಜೆಡಿಎಸ್ ಪಾಳೆಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಸಭೆ ಕೇವಲ ಅರಸೀಕೆರೆ ಕ್ಷೇತ್ರಕ್ಕೆ ಸೀಮಿತವಾಯಿತು. ಜೆಡಿಎಸ್ ನಿಂದ ಹೊರನಡೆದಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಸಮರ ಸಾರುವುದಷ್ಟೇ ಸಭೆಯ ಉದ್ದೇಶದಂತಿತ್ತು.
ಸಭೆಯುದ್ದಕ್ಕೂ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು, ದೇವೇಗೌಡರಿಂದಲೇ ಈ ಮಟ್ಟಕ್ಕೆ ಬೆಳೆದಿರುವ ಶಿವಲಿಂಗೇಗೌಡ, ಅವರ ಅನಾರೋಗ್ಯದ ಸಂದರ್ಭದಲ್ಲೂ ಭೇಟಿ ಮಾಡುವ ಸೌಜನ್ಯ ತೋರಿಲ್ಲ. ಅದರ ಶಾಪ ತಟ್ಟಲಿದೆ ಎಂದು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ಜೆಡಿಎಸ್ ಸರ್ಕಾರದ ಕೊಡುಗೆ ಏನು ಎಂಬುದರ ಬುಕ್ ಲೆಟ್ ಹೊರತಂದಿದ್ದ ಆ ವ್ಯಕ್ತಿಗೆ, ಈಗ ದೇವೇಗೌಡರ ಹೆಸರು ಹೇಳಿದರೆ, ಜೆಡಿಎಸ್ ಚಿನ್ಹೆ ತೋರಿದರೆ ಜನ ಬರಲ್ಲ ಎನ್ನುವ ಅನುಮಾನ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಯಾವಾಗ ಯಾರ ಕಾಲು, ಜುಟ್ಟು ಹಿಡಿಯಬೇಕು ಎಂಬುದು ಆ ವ್ಯಕ್ತಿಗೆ ಗೊತ್ತಿದೆ. ಈ ಬಾರಿ ಸಿದ್ದರಾಮಯ್ಯ ಅವರ ರಾಜಕೀಯದಲ್ಲಿ ಏನಾದರೂ ಏರುಪೇರಾದರೆ, ಅವನಾವ ಸಿದ್ದರಾಮಯ್ಯ ಎನ್ನುವ ಸ್ವಭಾವ ಇವರದ್ದು ಎಂದು ಹರಿಹಾಯ್ದರು.
ಕಾಂಗ್ರೆಸ್ ಸೇರುವ ಕಳ್ಳಾಟ 3 ವರ್ಷದಿಂದ ನಡೆಯುತ್ತಿದೆ. ಅದನ್ನೇ ಇಂದು ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ತಂದೆಯ ಸ್ಥಾನದಲ್ಲಿ ಇರುವ ದೇವೇಗೌಡರಿಗೆ ಈ ವಯಸ್ಸಿನಲ್ಲಿ ವಿಷ ಹಾಕುವ ಕೆಲಸ ಮಾಡಿದ್ದಿ. ಶಿವಲಿಂಗು ನಿನಗೆ ಅದರ ಶಾಪ ತಟ್ಟಲಿದೆ ಎಂದರು.
ಶಾಸಕ ಎಚ್.ಡಿ ರೇವಣ್ಣ, ಅರಸೀಕೆರೆ ಕ್ಷೇತ್ರದಲ್ಲಿ ಏನಾಗಿದೆ? ಶಿವಲಿಂಗೇಗೌಡರಿಗೆ ಏನೆಲ್ಲ ಮಾಡಿದ್ದೇವೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.
ಪರೋಕ್ಷ ಘೋಷಣೆ: ಅರಸೀಕೆರೆ ಕ್ಷೇತ್ರದ ಅಭ್ಯರ್ಥಿಯಾಗಿ ಬಾಣಾವರ ಅಶೋಕ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸದಿದ್ದರೂ, ಪರೋಕ್ಷವಾಗಿ ಅವರೇ ಅಭ್ಯರ್ಥಿ ಎಂದು ಕುಮಾರಸ್ವಾಮಿ ಹೇಳಿದರು.
ಈ ಬಾರಿ ಅರಸೀಕೆರೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರಂತೆ. ಹಾಗಾದರೆ, ಈ ಬಾರಿ ಅಶೋಕ್ ಗೆ ಲಕ್ ಹೊಡೆಯಲಿದೆ ಎನ್ನುವ ಮೂಲಕ ಅವರೇ ಅಭ್ಯರ್ಥಿ ಎಂದು ಬಿಂಬಿಸಿದರು.
ಹಾಸನದ ಪ್ರಸ್ತಾಪವಿಲ್ಲ: ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ಕುಮಾರಸ್ವಾಮಿ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಹೊಳೆನರಸೀಪುರದಲ್ಲಿ ನಡೆದ ಸಭೆಯಲ್ಲಿ ಭವಾನಿ ರೇವಣ್ಣ, ಎಚ್.ಡಿ. ರೇವಣ್ಣ ಅವರೊಂದಿಗೆ ಕುಮಾರಸ್ವಾಮಿ ಕಾಣಿಸಿಕೊಂಡರು. ಇತ್ತ ಅರಸೀಕೆರೆ ಕಾರ್ಯಕ್ರಮದಲ್ಲಿ ಚಿಕ್ಕಪ್ಪ ಸುತ್ತ ತಿರುಗಾಡುತ್ತಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರ ಮುಖದಲ್ಲೂ ನಿರಾಳತೆ ಇತ್ತು. ಹಾಗಾಗಿ ಭವಾನಿ ಅವರ ಟಿಕೆಟ್ ಕುರಿತು ಹೊಳೆನರಸೀಪುರದಲ್ಲಿ ನಡೆದ ಸಭೆಯಲ್ಲಿ ಚರ್ಚೆ ಆಗಿರಬಹುದು ಎನ್ನುವ ಮಾತುಗಳು ಕಾರ್ಯಕರ್ತರಿಂದ ಕೇಳಿ ಬಂದವು.
**
ನಮಗೆ ಟಿಪ್ಪು, ರಾಣಿ ಅಬ್ಬಕ್ಕ ಇಬ್ಬರೂ ಬೇಕು. ಸರ್ವಜನಾಂಗದ ಶಾಂತಿಯ ತೋಟ ಬೇಕು. ಆ ತೋಟಕ್ಕೆ ಬೆಂಕಿ ಹಚ್ಚುವ ಬಿಜೆಪಿಯನ್ನು ಜನ ಧಿಕ್ಕರಿಸಬೇಕು.
–ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.