ADVERTISEMENT

ಶಿರಾಡಿ ಸುರಂಗ ಮಾರ್ಗದ ಕುರಿತು ಗಡ್ಕರಿ ಜೊತೆಗೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:33 IST
Last Updated 21 ಜುಲೈ 2024, 14:33 IST
ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿರುವ ಸ್ಥಳಕ್ಕೆ ಭಾನುವಾರ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು
ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿರುವ ಸ್ಥಳಕ್ಕೆ ಭಾನುವಾರ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು   

ಸಕಲೇಶಪುರ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡ ಕುಸಿತ ಹಾಗೂ ತಡೆಗೋಡೆ ಕುಸಿತ ಅತಿವೃಷ್ಟಿಯಿಂದ ಆಗಿರುವುದಲ್ಲ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನಲ್ಲಿ ಹಾದುಹೋಗಿರುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೊಲ್ಲಹಳ್ಳಿ ಬಳಿ ತಡೆಗೋಡೆ ಕುಸಿತ, ದೊಡ್ಡತಪ್ಪಲೆ ಬಳಿ ಗುಡ್ಡ ಕುಸಿತವನ್ನು ಭಾನುವಾರ ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಾಳ್ಳುಪೇಟೆಯಿಂದ ಉದ್ದಕ್ಕೂ ಈ ಹೆದ್ದಾರಿಯ ಕಾಮಗಾರಿ ನೋಡಿಕೊಂಡು ಬಂದಿದ್ದೇನೆ. ಎಲ್ಲ ಕಡೆ ಎತ್ತರದ ಪ್ರದೇಶ ಹಾಗೂ ಗುಡ್ಡಗಳನ್ನು 90 ಡಿಗ್ರಿಯಲ್ಲಿ ತುಂಡು ಮಾಡಿದ್ದಾರೆ. ಕಾಮಗಾರಿಯ ಗುತ್ತಿಗೆದಾರರು 8 ವರ್ಷಗಳಿಂದ ನಿಗದಿತ ಅವಧಿಯಲ್ಲಿ ಕೆಲಸ ಮಾಡದೇ ಇರುವುದು ಒಂದು ಭಾಗವಾದರೆ, ಅದರ ಜೊತೆಗೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಆಗಿದೆ ಎಂದರು.

ADVERTISEMENT

ಪಶ್ಚಿಮಘಟ್ಟಗಳಲ್ಲಿ ಕೆಲಸ ಮಾಡುವಾಗ ಎಂಜಿನಿಯರ್‌ಗಳು ಸಹ ಪರಿಣತಿಯನ್ನು ಉಪಯೋಗಿಸಬೇಕಿತ್ತು. ಹುಡುಗಾಟಿಕೆಗೆ ಮಾಡುವಂತಹ ಕೆಲಸಗಳು ಅಲ್ಲ. ವೈಜ್ಞಾನಿಕವಾಗಿ ಮಾಡದೇ ಬೇಕಾಬಿಟ್ಟಿಯಾಗಿ ಮಾಡಿದ್ದಾರೆ ಎಂಬುದು ಜನ ಸಾಮಾನ್ಯರಿಗೂ ಅರ್ಥವಾಗುತ್ತದೆ ಎಂದರು.

ದೆಹಲಿಗೆ ಹೋದ ಕೂಡಲೇ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಹೆದ್ದಾರಿಯ ಕಾಮಗಾರಿ ವಸ್ತುಸ್ಥಿತಿಯನ್ನು ತೋರಿಸಿ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳ ಸಭೆ ನಡೆಸಿ, ಸಾಧ್ಯವಾದರೆ, ಸಚಿವ ಗಡ್ಕರಿ ಅವರನ್ನೂ ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡುತ್ತೇನೆ ಎಂದರು.

ಸುರಂಗ ಮಾರ್ಗ ಅಗತ್ಯವಿದೆ: ಮಂಗಳೂರಿನಲ್ಲಿ ಬಂದರು ಇರುವುದರಿಂದ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ವಾಣಿಜ್ಯ ಚಟುವಟಿಕೆ ಬೆಳೆಸುವುದಕ್ಕೆ ಉತ್ತಮ ಅವಕಾಶ ಇದೆ. ಹೆಚ್ಚಿನ ಮಟ್ಟದ ಸರಕು ಸಾಗಣೆಗೆ ಇದೀಗ ತಮಿಳುನಾಡು ಅವಲಂಬಿಸಬೇಕಾಗಿದೆ. ಸುರಂಗ ಮಾರ್ಗ ನಿರ್ಮಾಣ ಸಂಬಂಧ ಇತ್ತೀಚೆಗೆ ಗಡ್ಕರಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.

ಅರಣ್ಯ ಇಲಾಖೆಯ ಕಾನೂನುಗಳು ತೊಡಕಾಗಿವೆ. ಸುರಂಗ ಮಾರ್ಗದ ನಿರ್ಮಾಣದಿಂದ ಒಂದೆಡೆ ಪಶ್ಚಿಮಘಟ್ಟದ ಪರಿಸರದ ಮೇಲೆ ಉಂಟಾಗುವ ಅನಾಹುತ ತಪ್ಪಿಸಬಹುದು. ವನ್ಯಜೀವಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದಕ್ಕೆ, ಅವುಗಳ ಆವಾಸಸ್ಥನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಸುರಂಗ ನಿರ್ಮಾಣ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದ್ದು, ಈ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುವುದು ಎಂದರು.

ಶಾಸಕರಾದ ಸಿಮೆಂಟ್ ಮಂಜು, ಎಚ್‌.ಕೆ. ಸುರೇಶ್‌, ಬಾಲಕೃಷ್ಣ, ಮಾಜಿ ಸಚಿವ ಎಚ್‌.ಕೆ. ಕುಮಾರಸ್ವಾಮಿ, ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ, ಉಪವಿಭಾಗಾಧಿಕಾರಿ ಡಾ. ಎಂ.ಕೆ. ಶೃತಿ, ತಹಶೀಲ್ದಾರ್ ಜಿ. ಮೇಘನಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಕೃಷ್ಣ ಇದ್ದರು.

ಅತಿವೃಷ್ಟಿಗೆ ರಾಜ್ಯ ಸರ್ಕಾರ ಸ್ಪಂದಿಸಲಿ

ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಉತ್ತರ ಕನ್ನಡ ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳು ರಸ್ತೆಗಳು ರೈತರ ಬೆಳೆ ಹಾನಿಯಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳು ಕೂಡಲೇ ಭೇಟಿ ಮಾಡಬೇಕು. ಪರಿಹಾರ ನೀಡುವುದು ಎರಡನೇ ವಿಷಯ. ತಕ್ಷಣ ಬಂದು ಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕೊಡಗಿನ ಕುಶಾಲನಗರ ಸಾಯಿ ಬಡಾವಣೆ ಹಾರಂಗಿ ಜಲಾಶಯ ತುಂಬಿ ಅಲ್ಲಿಯ ಮನೆಗಳು ಜಲಾವೃತಗೊಂಡಿದ್ದವು. ಬೆಂಗಳೂರು ಕಾರ್ಪೋರೇಷನ್‌ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜನೆ ಮಾಡಿದ್ದೆ. ಅಗತ್ಯ ವಸ್ತುಗಳ ಖರೀದಿಗಾಗಿ ಸ್ಥಳದಲ್ಲಿಯೇ ತಲಾ ₹ 50 ಸಾವಿರ ಪರಿಹಾರ ನೀಡಲಾಗಿತ್ತು. ತಲಾ ₹ 10 ಲಕ್ಷ ವೆಚ್ಚದಲ್ಲಿ ಸುಮಾರು 1 ಸಾವಿರ ಮನೆಗಳನ್ನು ಕಟ್ಟಿಸಿಕೊಡಲಾಗಿದೆ ಎಂದರು. ಉತ್ತಮ ಮಳೆಯಾಗಿ ರಾಜ್ಯದ ಎಲ್ಲ ಜಲಾಶಯಗಳು ತುಂಬಿವೆ. ಸದ್ಯ ತಮಿಳುನಾಡು– ಕರ್ನಾಟಕ ನಡುವಿನ ನೀರಿನ ಸಂಘರ್ಷಕ್ಕೆ ಒಂದು ವರ್ಷ ವಿರಾಮ ಸಿಕ್ಕಿದಂತಾಗಿದೆ ಎಂದರು.

ನಾನು ರಾಜ್ಯಕ್ಕೆ ಬರುವುದನ್ನೇ ಸಹಿಸಲ್ಲ

ಕರ್ನಾಟಕಕ್ಕೆ ನಾನು ಬರೋದನ್ನೇ ಸಹಿಸುವುದಿಲ್ಲ ಅಂದ್ರೆ ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ? ರಾಜ್ಯಕ್ಕೆ ಬರಲೇಬಾರದಿತ್ತು. ಇಲ್ಲೇಕೆ ಬರುತ್ತಾರೆ ಎಂದು ಪ್ರಶ್ನೆ ಮಾಡುವುದು ಸರಿಯಲ್ಲ. ಅತಿವೃಷ್ಟಿ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನನ್ನ ಕರ್ತವ್ಯ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರದ ಜವಾಬ್ದಾರಿ ಅಲ್ಲವೇ? ಎನ್‌ಡಿಆರ್‌ಎಫ್‌ ಯಾರ ಅಧೀನದಲ್ಲಿದೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಶನಿವಾರ ಶಿರೂರಿನ ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರು ಅಲ್ಲಿಗೆ ಬರದಂತೆ ರಾಜ್ಯ ಸರ್ಕಾರ ಡ್ರಾಮಾವನ್ನೇ ಮಾಡಿತು. ಭೇಟಿ ಮಾಡಿದ ಸ್ಥಳದಿಂದ 3–4 ಕಿ.ಮೀ ದೂರವೇ ತಡೆಗೋಡೆ ಇಟ್ಟು ಕುಮಾರಸ್ವಾಮಿ ಬಂದಿದ್ದು ಯಾವುದೇ ಚಿತ್ರೀಕರಣವೇ ಆಗದಂತೆ ವ್ಯವಸ್ಥಿತವಾಗಿ ಮಾಡಿದರು. ಈ ವಿಚಾರದಲ್ಲಿ ಯಾರನ್ನೂ ಟೀಕೆ ಮಾಡಲು ಹೋಗುವುದಿಲ್ಲ. ಸದ್ಯ ಹಾಸನದಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಲು ಬಿಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಟರ ವಿಶ್ವಾಸದಲ್ಲಿ ಕೆಲಸ ಮಾಡಬೇಕು. ಇದು ಒಂದು ಒಕ್ಕೂಟ ವ್ಯವಸ್ಥೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.