ಹಾಸನ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲು ಗ್ರಾಮದ ಬಳಿ ಮತ್ತೆ ಭೂಕುಸಿತ ಉಂಟಾಗಿದೆ. ಗುರುವಾರ ಬೆಳಗಿನ ಜಾವ ಮಣ್ಣಿನಡಿ ಮಾರುತಿ ಆಮ್ನಿ ವಾಹನ ಸಿಲುಕಿದ್ದು, ಅದರಲ್ಲಿದ್ದ ಇಬ್ಬರು ಅಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬುಧವಾರ ಮಧ್ಯಾಹ್ನವೇ ಈ ಪ್ರದೇಶದಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿದಿತ್ತು. ಆಗ ಕೆಲಕಾಲ ಸಂಚಾರ ಸ್ಥಗಿತಗೊಳಿಸಿ, ಮಣ್ಣು ತೆರವು ಮಾಡಲಾಗಿತ್ತು. ನಂತರ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಗುರುವಾರ ಬೆಳಗಿನ ಜಾವ ಇದ್ದಕ್ಕಿಂತೆಯೇ ನೂರು ಅಡಿಗೂ ಎತ್ತರದ ಗುಡ್ಡ ಕುಸಿದು ಬಿದ್ದಿದೆ. ರಸ್ತೆಯ ತುಂಬೆಲ್ಲ ಮಣ್ಣು ತುಂಬಿದ್ದು, ವಾಹನಗಳು ಸಂಚರಿಸದಂತಾಗಿವೆ.
ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಸನದ ಹೊರವಲಯದ ಕಂದಲಿ ಬಳಿಯೇ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತಿದೆ. ಸಕಲೇಶಪುರದವರೆಗೆ ಮಾತ್ರ ಸಂಚರಿಸಲು ಅವಕಾಶವಿದ್ದು, ಸಕಲೇಶಪುರದಿಂದ ಮುಂದೆ ಸಂಚಾರ ಸ್ಥಗಿತಗೊಂಡಿದೆ.
ಮಾರನಹಳ್ಳಿಯಿಂದ ದೋಣಿಗಾಲ್‌ವರೆಗೆ ವಾಹನಗಳ ಸಾಲುಗಟ್ಟಿ ನಿಂತಿವೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದು, ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ರಸ್ತೆಯಲ್ಲಿ ತುಂಬಿರುವ ಮಣ್ಣು ತೆರವುಗೊಳಿಸಿದ ನಂತರ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.