ADVERTISEMENT

ಕಾರ್ತಿಕ್‌ ದೂರು: ನಿಷ್ಪಕ್ಷಪಾತ ತನಿಖೆ ಆಗಲಿ - ರಾಮಸ್ವಾಮಿ

ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ಬಿಜೆಪಿ ಮುಖಂಡ ಎ.ಟಿ. ರಾಮಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 12:43 IST
Last Updated 28 ಡಿಸೆಂಬರ್ 2023, 12:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾಸನ: ‘ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರಿಂದ ಬಲವಂತವಾಗಿ ಭೂಮಿ ಬರೆಸಿಕೊಂಡಿರುವ ಪ್ರಕರಣದಲ್ಲಿ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಆಗಬೇಕು’ ಎಂದು ಬಿಜೆಪಿ ಮುಖಂಡ ಎ.ಟಿ. ರಾಮಸ್ವಾಮಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆಗಳಾಗಿವೆ. ಈಗಲೂ ಈ ಜಿಲ್ಲೆಯಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆಗಳು ನಡೆಯುತ್ತಿವೆ’ ಎಂದರು.

ADVERTISEMENT

‘ಕಾರ್ತಿಕ್ ಅವರು ತಮ್ಮ ಭೂಮಿಯ ಬಗ್ಗೆ ಹೇಳಿಕೊಂಡಿದ್ದು, ದೂರು ನೀಡಿದ್ದಾರೆ. ಅವರ ಪತ್ನಿ ಶಿಲ್ಪಾ ಮೇಲೆಯೂ ಹಲ್ಲೆ ನಡೆದು, ಗರ್ಭಪಾತ ಆಗಿದ್ದು, ದೂರು ನೀಡಿದ್ದಾರೆ. ಎಲ್ಲ ದಾಖಲೆಯನ್ನು ಪರಿಶೀಲಿಸಿ ಇಂದು ಬಂದಿದ್ದೇನೆ. 2022 ಅಗಸ್ಟ್‌ನಲ್ಲಿ ಜಮೀನು ಖರೀದಿ ಮಾಡಲಾಗಿದೆ. 2023ರಲ್ಲಿ ಬಲವಂತ ಮಾಡಿ ಹೆದರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದಾರೆ. ಈ ಎಲ್ಲ ಬೇನಾಮಿ ವಹಿವಾಟಿನ ಬಗ್ಗೆ ಸೂಕ್ತ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘ಕಾರ್ತಿಕ್ ಅವರ ಹೆಸರಲ್ಲಿ ಭೂಮಿ ಖರೀದಿಸಿದ ನಂತರ ವ್ಯವಹಾರ ಸರಿಯಾಗದ ಹಿನ್ನೆಲೆಯಲ್ಲಿ ಕಿರಣ್ ರೆಡ್ಡಿ ಹೆಸರಿಗೆ ಮಾಡಲಾಗಿದೆ. ಈ ಬೇನಾಮಿ ಅವ್ಯವಹಾರ ತಡೆಯುವುದು, ಕಾನೂನು– ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ರಕ್ಷಕರೇ ಭಕ್ಷಕರಾದರೆ, ಕೊಲೆ ಮಾಡುವವರೇ ಜೊತೆ ಸೇರಿಕೊಂಡರೆ ಹೇಗೆ’ ಎಂದು ಕಿಡಿಕಾರಿದರು.

‘ಈ ಪ್ರಕರಣ ಸಂಬಂಧ ಯಾವುದೇ ಸಿಸಿಟಿವಿ ಕ್ಯಾಮೆರಾ ದಾಖಲೆಗಳಿಲ್ಲ. ಬ್ಯಾಂಕ್, ಪ್ರವಾಸಿ ಮಂದಿರ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಿಸಿಟಿವಿ ಇಲ್ಲ. ಇದು ಪ್ರಭಾವಿಗಳು ಸಾಕ್ಷಿ ನಾಶ ಮಾಡಲು ಮಾಡಿರುವ ಹುನ್ನಾರ’ ಎಂದು ಆರೋಪಿಸಿದರು.

‘ಲೂಟಿ, ಅಕ್ರಮಕ್ಕೆ ಎಲ್ಲರೂ ಕೈಜೋಡಿಸಿದ್ದಾರೆ. ಪ್ರಭಾಕರ್ ರೆಡ್ಡಿ ಅವರ ಮಗ ಕಿರಣ್ ರೆಡ್ಡಿ ಅವರಿಗೂ ರೇವಣ್ಣ ಅವರಿಗೂ ಏನು ಸಂಬಂಧ? ಕಿರಣ್ ರೆಡ್ಡಿ ಅವರು ಏನು ವ್ಯವಸಾಯ ಮಾಡುತ್ತಾರೆಯೇ? ಅವರಿಗೆ ಭೂಮಿ ಪರಭಾರೆ ಮಾಡಿರುವುದಾದರೂ ಏಕೆ’ ಎಂದು ಪ್ರಶ್ನಿಸಿದರು.

‘ಇವರು ರೈತಪರ ಎನ್ನುತ್ತಾರೆ. ಬೇನಾಮಿ ರೈತರು, ಸುಳ್ಳು ರೈತರು. ಒಳಗೊಂದು ಹೊರಗೊಂದು ನಾಟಕ ಆಡುತ್ತಾರೆ. ಬೇನಾಮಿಯ ಆಸ್ತಿ ಮಾಡುವವರು ರೈತರೇ’ ಎಂದು ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಕೀಲರಾದ ಜನಾರ್ದನ್, ಲೋಕೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.