ADVERTISEMENT

ಬೇಲೂರು: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಕೆ.ಸುರೇಶ್ ಗರಂ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:24 IST
Last Updated 21 ನವೆಂಬರ್ 2024, 14:24 IST
ಬೇಲೂರಿನಲ್ಲಿ ನಡೆದ ಕೆಡಿಪಿ‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ತಹಶೀಲ್ದಾರ್ ಎಂ.ಮಮತಾ, ತಾ.ಪಂ.ಆಡಳಿತಾಧಿಕಾರಿ ಡಾ.ರಮೇಶ್, ತಾ.ಪಂ. ಇಒ ವಸಂತ್ ಭಾಗವಹಿಸಿದ್ದರು.
ಬೇಲೂರಿನಲ್ಲಿ ನಡೆದ ಕೆಡಿಪಿ‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ತಹಶೀಲ್ದಾರ್ ಎಂ.ಮಮತಾ, ತಾ.ಪಂ.ಆಡಳಿತಾಧಿಕಾರಿ ಡಾ.ರಮೇಶ್, ತಾ.ಪಂ. ಇಒ ವಸಂತ್ ಭಾಗವಹಿಸಿದ್ದರು.   

ಬೇಲೂರು: ‘ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಜ್‌‌ಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇವರ ವಿರುದ್ಧ ತನಿಖೆ ನಡೆಸುವಂತೆ ಮೇಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು’ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು,

‘ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೊಡಗಿನ ಏಜೆನ್ಸಿ ಜೊತೆ ಶಾಮಿಲಾಗಿ, ನೆಡದ ಗಿಡಗಳಿಗೆ ಬಿಲ್ ಪಾವತಿಸಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ರಣಘಟ್ಟ ನೀರಾವರಿ ಯೋಜನೆ ಕುಂಟುತ್ತಾ ಸಾಗುತ್ತಿದ್ದು ಕಾಮಗಾರಿ ವೇಗವಾಗಿ ನಡೆಸಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು’ ಎಂದು ಎಂಜಿನಿಯರ್‌‌‌ಗಳಿಗೆ ಸೂಚಿಸಿದರು.

‘ಕಾರ್ಮಿಕ‌ ಇಲಾಖೆಯಲ್ಲಿ ದೊರೆಯುತ್ತಿರುವ ಸೌಕರ್ಯಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ, ಕಾಲ ಹರಣದಲ್ಲಿ ತೊಡಗಿದ್ದಾರೆ’ ಎಂದು ಹಿರಿಯ ಕಾರ್ಮಿಕ‌ ಇಲಾಖೆ ನಿರೀಕ್ಷಕ ವಿಜಯ್ ಕುಮಾರ್ ಅವರಿಗೆ ತರಾಟೆ ತೆಗೆದುಕೊಂಡರು.

ಹಲ್ಮಿಡಿ ರಸ್ತೆಯ ಬಾರ್‌‌‌ನಲ್ಲಿ, ರಸ್ತೆಗೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ, ಅಲ್ಲಿ‌ ಕುಡಿದು ಹುಡುಗಿಯರನ್ನು ಚುಡಾಯಿಸುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕೆಂದು ಅಬಕಾರಿ ನಿರೀಕ್ಷಕಿ ಚಂದನಾ ಅವರಿಗೆ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಬಿಡಬೇಕು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ರಸ್ತೆಗುಂಡಿಗಳನ್ನು ತಕ್ಷಣ ಮುಚ್ಚಿಸಬೇಕು, ಕಾಮಗಾರಿಗಳನ್ನು‌ ಪ್ರಾರಂಭ ಮಾಡದ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಎಡಿಎಲ್ ಆರ್ ಸುಳ್ಳು ಮಾಹಿತಿ ನೀಡಿರುವ ಜೊತೆಗೆ ಸಭೆಗೆ ಗೈರಾಗಿರುವುದರಿಂದ ಅವರಿಗೆ ನೋಟಿಸ್ ನೀಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಕಾಡಾನೆ ಓಡಿಸಲು ಮುಂದಾಗಬೇಕು, ಬೆಳೆ ಪರಿಹಾರವನ್ನು ತಕ್ಷಣ ನೀಡಲು ಮುಂದಾಗಬೇಕು ಎಂದು‌ ವಲಯ ಅರಣ್ಯಾದಿಕಾರಿ ಯತೀಶ್‌‌‌ಗೆ ತಿಳಿಸಿದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ಹಾಗೂ ದವಸ, ಧಾನ್ಯಗಳನ್ನು ಸಮರ್ಪಕವಾಗಿ ‌ವಿತರಿಸುವಂತೆ ಜಾಗೃತಿ ವಹಿಸಲು ಸಿಡಿಪಿಒ ಶಂಕರ ಮೂರ್ತಿಗೆ ಸಲಹೆ ನೀಡಿದರು.

ನಿವೃತ್ತ ಶಿಕ್ಷಕರು ಕಚೇರಿಗೆ ಬಂದರೆ ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಬಿಇಒ ರಾಜೇಗೌಡರಿಗೆ ಸೂಚಿಸಿದರು. 

ಕೆಡಿಪಿ ಸದಸ್ಯರಾದ ನಂದೀಶ್ ಹಾಗೂ ಚೇತನ್ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗಳಿಗೆ ರಕ್ಷಾ ಸಮಿತಿ ಹಣದಲ್ಲಿ ಲೋಪಗಳಾಗಿದ್ದು, ಟಿಎಚ್‌‌‌ಒ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಕೆಎಸ್ಆರ್‌‌‌ಟಿಸಿ ಡಿಪೋ ವ್ಯವಸ್ಥಾಪಕಿ ಶಾಜೀಯ, ಲೋಕೋಪಯೋಗಿ ಎಂಜಿನಿಯರ್ ದಯಾನಂದ್, ಆಡಾಳಿತಾಧಿಕಾರಿ ಡಾ.ರಮೇಶ್, ತಾ.ಪಂ. ಇಒ ವಸಂತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಅಂಗನವಾಡಿಗಳ ಶುಚಿತ್ವ ಕಾಪಾಡಲು ಸೂಚನೆ

ತಹಶೀಲ್ದಾರ್ ಎಂ.ಮಮತಾ ಮಾತನಾಡಿ ‘ಅಂಗನವಾಡಿಗಳ ಸುತ್ತ ಮುತ್ತಲಿನ ಆವರಣ ಶು‌ಚಿಯಾಗಿಟ್ಟುಕೊಳ್ಳಬೇಕು ಸ್ಥಳೀಯ ಪಿಡಿಒಗಳಿಗೆ ಹೇಳಿ ಶುಚಿ ಗೊಳಿಸಿಕೊಳ್ಳಬೇಕು’ ಎಂದು ಸಿಡಿಪಿಒ ಶಂಕರಮೂರ್ತಿಗೆ ತಿಳಿಸಿದರು. ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದ್ ಮಾತನಾಡಿ ‘ಕಾಮಗಾರಿಗಳು ನಡೆಯುತ್ತಿರುವ ಸಂದರ್ಭ ಅಯಾ ಇಲಾಖೆಯ ಮುಖ್ಯಸ್ಥರು ಹಾಗೂ ಎಂಜಿನಿಯರ್‌‌‌ಗಳು ಪದೇ ಪದೇ ಹೋಗಿ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿಯಾಗುವುದನ್ನು ತಡೆಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.