ADVERTISEMENT

ಆಲೂರು: ಕೆಂಚಾಂಬಿಕೆ ಜಾತ್ರಾ ಮಹೋತ್ಸವ ನಾಳೆಯಿಂದ

ರಕ್ತಬೀಜಾಸುರನನ್ನು ಸಂಹರಿಸಿದ ದೇವಿಯ ಪಾದಮುಟ್ಟಿ ನಮಸ್ಕರಿಸಲು ಅವಕಾಶ

ಎಂ.ಪಿ.ಹರೀಶ್
Published 4 ನವೆಂಬರ್ 2024, 7:00 IST
Last Updated 4 ನವೆಂಬರ್ 2024, 7:00 IST
ಆಲೂರು ತಾಲ್ಲೂಕಿನ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಸ್ಥಾನ.
ಆಲೂರು ತಾಲ್ಲೂಕಿನ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಸ್ಥಾನ.   

ಆಲೂರು: ಸಹೋದರಿ ಹಾಸನಾಂಬೆ ದೇವಿ ಜಾತ್ರೆ ಮುಗಿದ ನಂತರ, ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಿ ಜಾತ್ರೆ ನ. 5 ಮತ್ತು 6ರಂದು ನೆರವೇರಲಿದೆ.

ನ. 5ರಂದು ಹರಿಹಳ್ಳಿ ಮೂಲ ದೇವಸ್ಥಾನದಲ್ಲಿ ರಾತ್ರಿ ಸಪ್ತಮಾತೃಕಾ ಅಲಂಕಾರ, ಉದ್ವಾರ್ಚನೆ ಸುಗ್ಗಿ ನಡೆಯುತ್ತದೆ. ಸಂಜೆಯಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿ 8 ಗಂಟೆಗೆ ಮಹಾ ಮಂಗಳಾರತಿ ನಡೆಯುತ್ತದೆ. ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ನ. 6 ರಂದು ಬೆಳಿಗ್ಗೆ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿ, ಬೆಳ್ಳಿ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಕೆಂಚಾಂಬ ದೇವಾಲಯಕ್ಕೆ ತರಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ, ತೆಂಗಿನಕಾಯಿ ಈಡುಗಾಯಿ ಹಾಕುವುದು ವಿಶೇಷ.

ADVERTISEMENT

ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ತೊಡಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಲಾಗುತ್ತದೆ. ದೇವಸ್ಥಾನದ ಸುತ್ತ ಬಲಿ ಅನ್ನ ಹಾಕುತ್ತಾರೆ. ಸನಿಹದಲ್ಲಿದ್ದ ವೀರಭದ್ರ ಉತ್ಸವ ಮೂರ್ತಿಯನ್ನು ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ ಹೋಗಿ ಕರೆತಂದು, ಕೆಂಡೋತ್ಸವ ನಡೆಸುತ್ತಾರೆ. ನಂತರ ಸಾರ್ವಜನಿಕರು ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ ಒಂದು ಗಂಟೆಯವರೆಗೆ ಅವಕಾಶವಿದೆ.

ನಂತರ ದೇವಿಗೆ ಧರಿಸಿದ್ದ ಅಲಂಕಾರವನ್ನು ತೆಗೆದು, ಒಡವೆಗಳನ್ನು ಹರಿಹಳ್ಳಿ ಮೂಲ ದೇವಸ್ಥಾನಕ್ಕೆ ಉತ್ಸವದೊಂದಿಗೆ ಕರೆತರಲಾಗುತ್ತದೆ. ರಾತ್ರಿ ವೇಳೆಯಲ್ಲಿ ದೇವಿ ಸಂಚರಿಸುತ್ತಾಳೆ ಎಂಬ ಉದ್ದೇಶದಿಂದ, ಬೆಳಗಾಗುವವರೆಗೂ ದೇವಸ್ಥಾನದ ಸುತ್ತಲೂ ಯಾರೂ ಸುಳಿಯುವುದಿಲ್ಲ. ಒಂದು ವಾರದ ನಂತರ ಸಾಂಕೇತಿಕವಾಗಿ ಬಾಗಿಲು ತೆರೆಯುವ ಜಾತ್ರೆ ನಡೆಯುತ್ತದೆ.

ಕೆಂಚಾಂಬಿಕೆ

ರಕ್ತಬೀಜಾಸುರನ ಸಂಹಾರ

ಹಾಸನಾಂಬ ದೇವಿ ಸೇರಿ ಒಟ್ಟು ಏಳು ಜನ ಸಹೋದರಿಯರು. ಹಿರಿಯವಳಾದ ಕೆಂಚಾಂಬ (ಬ್ರಾಹ್ಮೀದೇವಿ) ಹರಿಹಳ್ಳಿಯಲ್ಲಿ ನೆಲೆಸಿದ್ದಾರೆ. ಮಹೇಶ್ವರಿ ದೇವಿ ಕೋಮಾರಿ ದೇವಿ ವಾರಾಹಿ ದೇವಿ ಎಂಬುವವರು ಹಾಸನಾಂಬ ದೇವಾಲಯದಲ್ಲಿ ತ್ರಿಮೂರ್ತಿಗಳಾಗಿ ನೆಲೆಸಿದ್ದಾರೆ. ವೈಷ್ಣವಿ ದೇವಿ ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು ದೇವಿಗೆರೆ ಕೊಳದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಹಾಸನಾಂಬ ದೇವಾಲಯ ಕೆಂಚಾಂಬ ದೇವಾಲಯ ಮತ್ತು ದೇವಿಗೆರೆಗೆ ಪೂರಕ ಸಂಬಂಧವಿದೆ. ಮಹಿಷಾಸುರನೆಂಬ ರಾಕ್ಷಸನನ್ನು ಚಾಮುಂಡೇಶ್ವರಿ ಸಂಹರಿಸಿದ ನಂತರ ಅವನ ಮಂತ್ರಿಯಾಗಿದ್ದ ರಕ್ತಬೀಜಾಸುರ ಎಂಬ ರಾಕ್ಷಸ ದೇವಿಯಿಂದ ತಪ್ಪಿಸಿಕೊಂಡು ಈ ಭಾಗಕ್ಕೆ ಬರುತ್ತಾನೆ. ಅವನ ಉಪಟಳ ತೀಕ್ಷ್ಣವಾಗಿ ಇಲ್ಲಿಯ ಪ್ರಾಣಿ ಪಶು ಪಕ್ಷಿಗಳಾದಿಯಾಗಿ ಮಾನವರಿಗೂ ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜನರ ಮೊರೆಗೆ ಓಗೊಟ್ಟು ರಕ್ತಬೀಜಾಸುರನ ಸಂಹಾರಕ್ಕೆಂದು ಹರಿಹಳ್ಳಿಯಲ್ಲಿ ಆದಿಶಕ್ತಿಯಾಗಿ ಕೆಂಚಾಂಬ ಅವತರಿಸುತ್ತಾಳೆ. ಇವಳು ಸರಸ್ವತಿ ಪಾರ್ವತಿ ಹಾಗೂ ಲಕ್ಷ್ಮಿಯರ ಸಂಪೂರ್ಣ ಶಕ್ತಿ ಪಡೆದು ರಾಕ್ಷಸರೊಡನೆ ಯುದ್ಧ ಮಾಡಿ ಅನೇಕರನ್ನು ಸಂಹಾರ ಮಾಡುತ್ತಾಳೆ. ಆದಿಶಕ್ತಿ ಕೆಂಚಾಂಬಿಕೆಯು ರಕ್ತಬೀಜಾಸುರನನ್ನು ಉಪಾಯದಿಂದ ಸಂಹರಿಸುವ ಸಂಕಲ್ಪ ಮಾಡಿ ತನ್ನ ನಾಲಿಗೆಯನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರಾಕ್ಷಸ ಬರುವಂತೆ ಮಾಡಿ ಕೊಲ್ಲುತ್ತಾಳೆ. ಹೀಗೆ ರಕ್ತ ಬೀಜಾಸುರನ ಸಂಹಾರ ಮಾಡಿದ ಸ್ಥಳದಲ್ಲೇ ಕೆಂಚಾಂಬಿಕೆ ನೆಲೆಸಿದ್ದಾಳೆ ಎಂದು ಇತಿಹಾಸ ಹೇಳುತ್ತದೆ. ಈ ಕತೆಗೆ ಪೂರಕವಾಗಿ ಇಲ್ಲಿನ ಮಣ್ಣು ಕೆಂಪಾಗಿದೆ.

ವಾರದ ಮೂರು ದಿನ ದರ್ಶನಕ್ಕೆ ಅವಕಾಶವಿದೆ. ಜಾತ್ರೆ ಸಂದರ್ಭದಲ್ಲಿ ಮಾತ್ರ ದೇವಿ ಪಾದ ಮುಟ್ಟಿ ನಮಸ್ಕರಿಸಲು ಅವಕಾಶ ನೀಡಲಾಗುತ್ತದೆ. ರಾತ್ರಿ ದೇವಸ್ಥಾನದ ಬಳಿ ಮಾನವರು ಸಂಚರಿಸಿದರೆ ಪ್ರಾಣ ಬಲಿಯಾಗುತ್ತದೆ ಎಂಬ ನಂಬಿಕೆ ಇದೆ.
-ರಘು, ಕೆಂಚಾಂಬ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ
ರಕ್ತ ಬೀಜಾಸುರನನ್ನು ಸಂಹರಿಸಿದ ದೇವಿ ಕೆಂಚಾಂಬಿಕೆ. ದೇವಿ ದರ್ಶನದೊಂದಿಗೆ ಪಾದ ಮುಟ್ಟಿ ನಮಸ್ಕರಿಸಲು ಅವಕಾಶವಿರುವುದು ಈ ದೇವಸ್ಥಾನದಲ್ಲಿ ಮಾತ್ರ. ತಾಲ್ಲೂಕು ಆಡಳಿತ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ನಿರ್ದೇಶನ ನೀಡಿದ್ದೇನೆ.
-ಸಿಮೆಂಟ್ ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.