ADVERTISEMENT

ಪ್ರೀತಂ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಹಾಸನದಲ್ಲಿ ಮೈತ್ರಿ ಪಕ್ಷಗಳ ನಾಯಕರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 0:17 IST
Last Updated 13 ಫೆಬ್ರುವರಿ 2024, 0:17 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

(ಸಂಗ್ರಹ ಚಿತ್ರ)

ಹಾಸನ: ‘ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರಿಗೆ ಇನ್ನೂ ಸಣ್ಣ ವಯಸ್ಸು. ಪಾಪ ಬಿರುಸಿನಲ್ಲಿ ಮಾತಾಡುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ADVERTISEMENT

‌‘ಲೋಕಸಭೆ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಗೆ ಅವಕಾಶ ನೀಡಬೇಕು’ ಎಂಬ ಪ್ರೀತಂ ಹೇಳಿಕೆಗೆ ತಾಲ್ಲೂಕಿನ ಚನ್ನಂಗಿಹಳ್ಳಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಆತನೂ ಒಬ್ಬ ನಮ್ಮ ತಮ್ಮ ಅಲ್ವೆ? ಕುಳಿತು ಸರಿ ಮಾಡೋಣ’ ಎಂದರು.

‘ಅವರನ್ನೇ ಕಣಕ್ಕಿಳಿಸಬೇಕೆಂದರೆ ಕಣಕ್ಕಿಳಿಸೋಣ. ಸ್ಪರ್ಧಿಸುವ ಆಸೆ ಅವರಿಗಿದ್ದರೆ ಚರ್ಚಿಸೋಣ. ನಾವು–ಅವರು ಅಣ್ಣ-ತಮ್ಮಂದಿರಂತೆ ಹೋಗಬೇಕಲ್ವಾ? ಯಾರ‍್ಯಾರೋ ಏನೇನೋ ಮಾತನಾಡುತ್ತಾರೆ. ಪಾಪ, ಅದಕ್ಕೆ ಅವರು ಪ್ರತಿಕ್ರಿಯಿಸುತ್ತಾರೆ. ಕುಳಿತು ಸರಿ ಮಾಡೋಣ, ಅದೇನೂ ಸಮಸ್ಯೆ ಅಲ್ಲ’ ಎಂದು ಹೇಳಿದರು.

‌ಅವರ ಹೇಳಿಕೆಗೆ ನಗರದಲ್ಲಿ ತಿರುಗೇಟು ನೀಡಿದ ಪ್ರೀತಂ, ‘ರಾಜಕಾರಣದಲ್ಲಿ ಅಣ್ಣ-ತಮ್ಮಂದಿರಾಗುವುದು ಸಾಧ್ಯವಿಲ್ಲ. ಸದಾ ಪಕ್ಕದಲ್ಲೇ ಕೂರಿಸಿಕೊಂಡಿರುವ ಅವರ ತಮ್ಮನೊಂದಿಗೇ ಮಾತನಾಡಿಕೊಳ್ಳಲಿ’ ಎಂದರು.

‘ಹಾಸನದಲ್ಲಿ ನನ್ನ ಶಕ್ತಿ ಏನೆಂದು ಅವರಿಗೆ ಅರ್ಥವಾಗಿರುತ್ತದೆ. ನನ್ನೊಂದಿಗೆ ಕುಳಿತು ಮಾತನಾಡುವ ಬದಲು, ಅವರು ಶಾಸಕರೊಂದಿಗೆ ಕುಳಿತು ಮಾತನಾಡುವುದು ಒಳ್ಳೆಯದು. ನಾನೇನು ಮಾಡಬೇಕು ಎಂಬುದನ್ನು ನಮ್ಮ ಪಕ್ಷ ತೀರ್ಮಾನಿಸುತ್ತದೆ. ಅದನ್ನು ಬೇರೆಯವರು ಹೇಳಬೇಕಿಲ್ಲ’ ಎಂದು ಖಾರವಾಗಿ ನುಡಿದರು.

‘ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ 84ಸಾವಿರ ಮತ ಪಡೆದಿತ್ತು. ಈಗ ಪಕ್ಷದ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಆಗ ಪ್ರೀತಂನನ್ನು ಸೋಲಿಸಿ ಎಂದಿದ್ದರು. ಈಗ ತಮ್ಮ ಎನ್ನುತ್ತಿದ್ದಾರೆ. 2028ರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.